

ಕಡೂರು: ವಿದ್ಯುತ್ ಅಡಚಣೆಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಮರ್ಪಕ ವಿದ್ಯುತ್ ಸರಬರಾಜಿಗಾಗಿ ತಾಲೂಕಿನ ಯಳ್ಳಗೊಂಡನಹಳ್ಳಿ, ಸರಸ್ವತಿಪುರ ಹಾಗೂ ಮತಿಘಟ್ಟ ಭಾಗದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೆಸ್ಕಾಂ ಎಇಇ ತಿರುಪತಿನಾಯ್ಕ ತಿಳಿಸಿದರು.
ಪಟ್ಟಣದ ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಸೋಮವಾರ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಈಗಾಗಲೇ ಸರಸ್ವತಿಪುರ, ಮತಿಘಟ್ಟ ಭಾಗದಲ್ಲಿ ಜಾಗದ ಗುರುತಿಸುವಿಕೆ ಕಾರ್ಯ ನಡೆಯುತ್ತಿದೆ. ಯಳ್ಳಗೊಂಡನಹಳ್ಳಿ ಗ್ರಾಮದಲ್ಲಿ ಜಾಗ ಗುರುತಿಸಿ ವಿತರಣಾ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಕಡೂರುಹಳ್ಳಿ ಗ್ರಾಮದ ಮಂಜಪ್ಪ ಮಾತನಾಡಿ, 63 ಕೆವಿಯ ವಿದ್ಯುತ್ ಪರಿವರ್ತಕದಲ್ಲಿ ಐಪಿ ಸೆಟ್‌ಗಳು ಓವರ್ ಲೋಡ್‌ಆಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ಪರಿವರ್ತಕ ಅಳವಡಿಸಬೇಕು ಎಂದು ಮನವಿ ಮಾಡಿದರು. ಕವಳಿಪುರದ ಕೆ.ಎಸ್.ತಮ್ಮಯ್ಯ ಮಾತನಾಡಿ, 2020-21ರಲ್ಲಿ ವಿದ್ಯುತ್ ಕಂಬಗಳಿಗೆ ಟಿಸಿ ಅಳವಡಿಕೆಗೆ ಹಣ ಪಾವತಿಸಿದ್ದರೂ ಈವರೆಗೆ ಟಿಸಿ ಅಳವಡಿಸಿಲ್ಲ ಎಂದು ದೂರಿದರು.
ಜಿ. ತಿಮ್ಮಾಪುರ ಗ್ರಾಮದ ಪಿ.ಸಿ.ಗಂಗಾಧರಪ್ಪ 2018-19ರಲ್ಲಿ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿ ಹಣ ಪಾವತಿಸಿದ್ದರೂ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ನನ್ನ ಸ್ವಂತ ಹಣದಲ್ಲಿ ಕಾಮಗಾರಿ ಮಾಡಿಸಿದ್ದು, ಅಕ್ರಮ ಸಕ್ರಮ ಯೋಜನೆ ಅಡಿ ಪಾವತಿಸಿದ ಹಣ ಹಿಂದಿರುಗಿಸಬೇಕು ಅಥವಾ ಅದೇ ಹಣದಲ್ಲಿ ಬೇರೆ ಕಾಮಗಾರಿ ಮಾಡಿಕೊಡಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಒತ್ತಾಯಿಸಿದರು.
ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ನನ್ನ ನಂತರ ಅರ್ಜಿ ಸಲ್ಲಿಸಿದವರಿಗೆ ಸಂಪರ್ಕ ನೀಡಲಾಗಿದೆ. ನನಗೆ ಇಲ್ಲಿಯವರೆಗೆ ಸಂಪರ್ಕ ನೀಡಿಲ್ಲ. ಈ ತಾರತಮ್ಯಕ್ಕೆ ಕಾರಣವೇನು ಎಂದು ಮೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರು.
ಮೆಸ್ಕಾಂ ಎಇಇ ಎಚ್.ತಿರುಪತಿನಾಯ್ಕ ಮಾತನಾಡಿ, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡವರು ಐಪಿ ಸ್ಥಾವರಗಳಿಗೆ ವಿದ್ಯುತ್ ಕಲ್ಪಿಸಿಸಲು ಹಣಪಾವತಿಸಿ ಅಧಿಕೃತವಾಗಿಗೊಳಿಸಿದರೆ ಹೆಚ್ಚುವರಿ ಪರಿವರ್ತಕ ಇಲ್ಲವೆ 100 ಕೆವಿ ಪರಿವರ್ತಕ ಅಳವಡಿಸಲು ಕ್ರಮ ವಹಿಸಲಾಗುತ್ತದೆ. ಇನ್ನು 2018-19ನೇ ಸಾಲಿನ ಟಿಸಿ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜೇಷ್ಟೃತೆ ಆಧಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕಳೆದ ವಾರದಲ್ಲಿ ಗಾಳಿ, ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಒಂದಷ್ಟು ಅಡಚಣೆಗಳು ಉಂಟಾಗಿದೆ ಎಂದರು.