

ಮುಂಡರಗಿ: ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿಗೆ ಮುಳುಗಡೆ ಪ್ರದೇಶಕ್ಕೆ ಒಳಪಡುವ ತಾಲೂಕಿನ ಗ್ರಾಮಗಳಿಗೆ ಗದಗ ಜಿಲ್ಲಾಧಿಕಾರಿ ಗೋವಿಂದರಡ್ಡಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಠ್ಠಲಾಪುರದಲ್ಲಿ ಡಿಸಿ ಎದುರು ಅಳಲು ತೋಡಿಕೊಂಡ ಗ್ರಾಮಸ್ಥರು, ‘ಗ್ರಾಮಕ್ಕೆ ಪುನರ್ವಸತಿ ಕಲ್ಪಿಸುವ ಕೆಲಸ ನಡೆದಿಲ್ಲ. ಹಲವು ವರ್ಷಗಳಿಂದ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ತುಂಗಭದ್ರಾ ನದಿಯ ಒಳಹರಿವು ಹೆಚ್ಚಾದರೆ ಮನೆಗಳಿಗೆ ನೀರು ನುಗ್ಗುತ್ತದೆ. ಇದರಿಂದ ಗ್ರಾಮಸ್ಥರು ಪರದಾಡುವ ಸ್ಥಿತಿ ಇದೆ. ಪುನರ್ವಸತಿ ಕಲ್ಪಿಸುವ ಕೆಲಸವಾಗಬೇಕು’ ಎಂದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಈ ಬಗ್ಗೆ ನೀರಾವರಿ ಇಲಾಖೆಯವರೊಂದಿಗೆ ಚರ್ಚಿಸಿದ್ದು, ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದಷ್ಟು ಬೇಗ ಪುನರ್ವಸತಿ ಕಲ್ಪಿಸಲು ಕ್ರಮ ವಹಿಸಲಾಗುತ್ತದೆ’ ಎಂದರು.
ಗುಮ್ಮಗೋಳ ಗ್ರಾಮದಲ್ಲಿ ಸಮಸ್ಯೆ ಹೇಳಿಕೊಂಡ ಸ್ಥಳೀಯರು, ‘ಪುನರ್ವಸತಿ ಗ್ರಾಮದಿಂದ ಈಗಿನ ಹಳೇ ಗುಮ್ಮಗೋಳ ಭಾಗದಲ್ಲಿರುವ ಜಮೀನುಗಳಿಗೆ ಬಂದು ಹೋಗಲು ಸಮರ್ಪಕ ರಸ್ತೆ ಮಾರ್ಗವಿಲ್ಲ. ಈಗಿರುವ ರಸ್ತೆ ತುಂಬಾ ದೂರವಿದ್ದು, ಸಮೀಪದಲ್ಲಿರುವ ಹಳ್ಳಕ್ಕೆ ಸೇತುವೆ ನಿರ್ಮಿಸಿ ಜಮೀನಿಗಳಿಗೆ ತೆರಳಲು ಅನುಕೂಲ ಮಾಡಿಕೊಡಬೇಕು’ ಎಂದರು.
ಈ ಬಗ್ಗೆ ಕ್ರಮ ವಹಿಸಲಾಗುತ್ತದೆ ಎಂದು ಡಿಸಿ ಭರವಸೆ ನೀಡಿದರು. ಅಲ್ಲದೆ, ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಹೆಚ್ಚಿಸಿದ್ದು, ಕಡಿಮೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ‘ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಈಗಿನ ನೀರಿನ ಮಟ್ಟ ಕಡಿಮೆ ಮಾಡಲು ಸಾಧ್ಯವಿಲ್ಲ’ ಎಂದು ಡಿಸಿ ತಿಳಿಸಿದರು.
ಹಮ್ಮಿಗಿ ಬಳಿಯ ಸಿಂಗಟಾಲೂರು ಬ್ಯಾರೇಜ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ನೀರಿನ ಹರಿವು, ನೀರಿನ ಮಟ್ಟ ವೀಕ್ಷಿಸಿದರು. ಬ್ಯಾರೇಜ್ ಹಿನ್ನೀರಿಗೆ ಮುಳುಗಡೆ ಪ್ರದೇಶಕ್ಕೆ ಒಳಪಡುವ ಗ್ರಾಮಗಳ ಮನೆಗೆ ನೀರು ನುಗ್ಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿ.ಪಂ. ಸಿಇಒ ಭರತ್ ಎಸ್, ಎಸ್‌ಪಿ ಬಿ.ಎಸ್. ನೇಮಗೌಡ್ರ, ತಹಸೀಲ್ದಾರ್ ಧನಂಜಯ ಎಂ, ಸಿಂಗಟಾಲೂರು ಯೋಜನೆ ಇಇ ಪ್ರಕಾಶ ಐ, ತಾ.ಪಂ. ಇಒ ವಿಶ್ವನಾಥ ಹೊಸಮನಿ, ಸಿಪಿಐ ಮಂಜುನಾಥ ಕುಸುಗಲ್ ಇತರರು ಇದ್ದರು.