ನದಿಪಾತ್ರದ ನಿವಾಸಿಗಳ ಸ್ಥಳಾಂತರಕ್ಕೆ ಕ್ರಮ

sasvehalli
Published on

ಸಾಸ್ವೆಹಳ್ಳಿ: ತುಂಗಾ ಮತ್ತು ಭದ್ರಾ ಜಲಾಶಯದ ಪ್ರದೇಶದಲ್ಲಿ ಕಳೆದ ಮೂರ‌್ನಾಲ್ಕು ದಿನಗಳಿಂದ ಅತ್ಯಧಿಕ ಮಳೆ ಆಗುತ್ತಿದ್ದು, ಈಗಾಗಲೇ ತುಂಗಾ ಜಲಾಶಯ ತುಂಬಿರುವ ಕಾರಣಕ್ಕೆ ನದಿಗೆ ನೀರು ಬಿಡಲಾಗಿದೆ.

ಹೊನ್ನಾಳಿ- ನ್ಯಾಮತಿ ತಾಲೂಕಿನಲ್ಲಿ ಹಾದುಹೋಗಿರುವ ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ನದಿ ನೀರಿನ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾದಲ್ಲಿ ಹೋಬಳಿಯ ಹಳೇ ಐನೂರು ಗ್ರಾಮ ಹಾಗೂ ಸಾಸ್ವೆಹಳ್ಳಿಯ ದಾಸರಬೀದಿ ಜನವಸತಿ ಪ್ರದೇಶದ ಕೆಲವು ಮನೆಗಳು ಜಲಾವೃತಗೊಳ್ಳಲಿವೆ. ಆ ಮನೆಗಳಿಗೆ ಹೊನ್ನಾಳಿ- ಚನ್ನಗಿರಿ ಉಪ ವಿಭಾಗದ, ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಬುಧವಾರ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.

ಈ ವೇಳೆ ಮಾತನಾಡಿದ ಎಸಿ, ನದಿ ನೀರಿನ ಮಟ್ಟ ಇನ್ನೂ ಹೆಚ್ಚಾಗಿ, ಈ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಕಂಡು ಬಂದರೆ, ಕೂಡಲೆ ಕಾಳಜಿ ಕೇಂದ್ರ ತೆರೆದು ಅಲ್ಲಿಗೆ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಪ್ರತಿ ವರ್ಷ ಮಳೆಗಾಲದಲ್ಲಿ ನದಿಯ ಪ್ರವಾಹದಿಂದ ಮನೆಗಳು ಜಲಾವೃತಗೊಂಡು ಆಗುತ್ತಿರುವ ತೊಂದರೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಿ ಎಂದು ಉಪವಿಭಾಗಾಧಿಕಾರಿಗೆ ಒತ್ತಾಯಿಸಿದರು.

ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜಗೌಡ, ಹೊನ್ನಾಳಿ ಪೊಲೀಸ್ ಠಾಣೆಯ ಪಿಐ (ಸಿಪಿಐ) ಸುನಿಲ್‌ಕುಮಾರ್, ಉಪತಹಸೀಲ್ದಾರ್ ಚಂದ್ರಪ್ಪ, ರಾಜಸ್ವ ನಿರೀಕ್ಷಕ ದಿನೇಶ್‌ಬಾಬು, ಗ್ರಾಮ ಲೆಕ್ಕಾಧಿಕಾರಿ ಧರ್ಮಪ್ಪ, ಮಂಜುನಾಥ್, ನೌಕರ ತಿಪ್ಪೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net