75 ಜಂಕ್ಷನ್‌ಗಳಲ್ಲಿ ಮರು ವಿನ್ಯಾಸಕ್ಕೆ ಕ್ರಮ: ತುಷಾರ್ ಗಿರಿನಾಥ್ ಹೇಳಿಕೆ

safety roads
Published on

ಬೆಂಗಳೂರು: ಮಹಾನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ 75 ಜಂಕ್ಷನ್‌ಗಳನ್ನು ಮರು ವಿನ್ಯಾಸಗೊಳಿಸಿ ಜನಸ್ನೇಹಿ ರಸ್ತೆಗಳನ್ನು ಅಭಿವೃದ್ಧಿಪಡಿಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯ ಡಾ. ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಜಾಗತಿಕ ರಸ್ತೆ ಸುರಕ್ಷತೆಗಾಗಿ ಬ್ಲೂಮ್‌ಬರ್ಗ್ ಫಿಲಾಂತ್ರಪಿಸ್ ಇನಿಶಿಯೇಟಿವ್ ಅಡಿಯಲ್ಲಿ ಜ್ಞಾನ ಪಾಲುದಾರರಾಗಿ ಡಬ್ಲ್ಯುಆರ್‌ಐ ಇಂಡಿಯಾದ ಸಹಭಾಗಿತ್ವದಲ್ಲಿ ಆಯೋಜಿಸಿರುವ 2 ದಿನಗಳ ‘ನಮ್ಮ ರಸ್ತೆ ಪ್ರದರ್ಶನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದಲ್ಲಿ ಜನರ ಕೇಂದ್ರಿತ ಜಂಕ್ಷನ್ ವಿನ್ಯಾಸಗಳನ್ನು ರಚಿಸುವ ಗುರಿಯನ್ನು ಪಾಲಿಕೆ ಹೊಂದಿದೆ. ಇದರಿಂದ ನಾಗರಿಕರು ಸುರಕ್ಷಿತ, ಪರಿಣಾಮಕಾರಿ ಮತ್ತು ಸುಲಲಿತವಾಗಿ ಪ್ರವೇಶಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ‘ಸುರಕ್ಷಾ 75 ಮಿಷನ್’ ಅಡಿಯಲ್ಲಿ ಪ್ರಮುಖ 75 ಜಂಕ್ಷನ್‌ಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. ಇವುಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ನಮ್ಮ ರಸ್ತೆ ಎಂಬ ವಿಶಿಷ್ಟ ಅಭಿಯಾನವು ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡಲು ಸಾಕಷ್ಟು ಸಹಕಾರಿಯಾಗಲಿದೆ. ಇದರಿಂದ ನಗರದಲ್ಲಿ ಸಾರಿಗೆ ಸೌಲಭ್ಯವನ್ನು ಪ್ರೋತ್ಸಾಹಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು, ಪಾದಚಾರಿ-ಸ್ನೇಹಿ ಬೀದಿ, ಸೈಕ್ಲಿಂಗ್‌ಗೆ ಮೀಸಲಾದ ಪ್ರತ್ಯೇಖ ಲೇನ್‌ಗಳು ಹಾಗೂ ಹಸಿರುಮಯವಾದ ಸ್ಥಳಗಳನ್ನು ಸೃಷ್ಟಿಸಲು ಸಹಕಾರಿಯಾಗಲಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಇಂಜಿನಿಯರಿಂಗ್ ವಿಭಾಗದ ಪ್ರಧಾನ ಅಭಿಯಂತರ ಪ್ರಹ್ಲಾದ್, ಜಾಗತಿಕ ರಸ್ತೆ ಸುರಕ್ಷತೆಗಾಗಿ ಬ್ಲೂಮ್‌ಬರ್ಗ್ ಫಿಲಾಂತ್ರಪೀಸ್ ಇನಿಶಿಯೇಟಿವ್‌ನ ವೈಟಲ್ ಸ್ಟ್ರಾಟಜೀಸ್‌ನ (ರಸ್ತೆ ಸುರಕ್ಷತೆ) ಹಿರಿಯ ವ್ಯವಸ್ಥಾಪಕ ಲೀವಾಂಟಾ ಮಿಲ್ಲರ್, ಡಬ್ಲುೃಆರ್‌ಐ ರಾಸ್ ಸೆಂಟರ್‌ನ ಕ್ಲೌಡಿಯಾ ಆಡ್ರಿಯಾಜೋಲಾ-ಸ್ಟೀಲ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.

ನಗರದಲ್ಲಿ ಮೆಟ್ರೋ ಜಾಲ, ಉಪನಗರ ರೈಲು ಸೌಲಭ್ಯ ಮತ್ತು ಬಸ್‌ಗಳ ಸೇವೆಗಳ ತ್ವರಿತ ವಿಸ್ತರಣೆಯೊಂದಿಗೆ ಬೆಂಗಳೂರು ನಿರ್ಣಾಯಕ ಹಂತದಲ್ಲಿದೆ. ಈ ಎಲ್ಲ ಪ್ರಯತ್ನಗಳ ಯಶಸ್ಸು ಸಂಪೂರ್ಣ ಸಂಪರ್ಕಿತ ಸಾರಿಗೆ ವ್ಯವಸ್ಥೆ ಮತ್ತು ಪಾದಚಾರಿ ಮೂಲಸೌಕರ್ಯಗಳ ಯೋಜನೆ, ವಿನ್ಯಾಸ ಮತ್ತು ಕಾರ್ಯಾಚರಣೆಗೊಳಿಸುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ಸುಯೋಜಿತ ವ್ಯವಸ್ಥೆಯು ಜನರನ್ನು ಒಂದು ಸಾರಿಗೆ ವಿಧಾನದಿಂದ ಇನ್ನೊಂದು ಸಾರಿಗೆ ವಿಧಾನಕ್ಕೆ ಸರಳ ಹಾಗೂ ಸುರಕ್ಷಿತವಾಗಿ ಬದಲಾಯಿಸಲು ಅನುಕೂಲ ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ತ್ವರಿತವಾಗಿ ಯೋಜನೆಗಳನ್ನು ಕೈಗೊಳ್ಳಲು ನಾಗರಿಕರು ನೀಡುವ ಉತ್ತಮ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಪಾಲಿಕೆ ಮುಂದಾಗಿದೆ.

ನಾಗರಿಕರಿಂದ ಸಲಹೆ-ಸೂಚನೆಗೆ ಅವಕಾಶ:

ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಆಯೋಜಿಸಿರುವ ಪ್ರದರ್ಶನದಲ್ಲಿ ನಾಗರಿಕರಿಗೆ ಉಚಿತ ಪ್ರವೇಶ ಇದೆ. ಪ್ರದರ್ಶಿನಿ ವೀಕ್ಷಿಸಿ ತಮ್ಮ ಬಡಾವಣೆಗಳ ವ್ಯಾಪ್ತಿಯಲ್ಲಿ ಬಸ್ ನಿಲುಗಡೆಯ ತಂಗುದಾಣ, ರಸ್ತೆ ಸುರಕ್ಷತೆ, ುಟ್‌ಪಾತ್ ವಿನ್ಯಾಸ, ಜಂಕ್ಷನ್‌ಗಳ ಅಭಿವೃದ್ಧಿ ಕುರಿತು ಸಲಹೆಗಳನ್ನು ಸಲ್ಲಿಸಬಹುದಾಗಿದೆ.

ಸಾರ್ವಜನಿಕರು ಉಪಯೋಗಿಸುವಂತಹ ರಸ್ತೆ, ಪಾದಚಾರಿ ಮಾರ್ಗಗಳನ್ನು ನಾಗರಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ‘ನಮ್ಮ ರಸ್ತೆ ಪ್ರದರ್ಶನ’ದ ವೇಳೆ ಸಂಗ್ರಹಿಸುವ ಉತ್ತಮ ಸಲಹೆಗಳನ್ನು ಪರಿಗಣಿಸಿ ರಸ್ತೆಗಳ ಅಭಿವೃದ್ಧಿಯಲ್ಲಿ ಅಡಕಗೊಳಿಸಲಾಗುವುದು.

- ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net