ಸಿಬ್ಬಂದಿ ನೇಮಕಕ್ಕೆ ಕ್ರಮ

dinesh-gundu-rao-4787
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಆರೋಗ್ಯ ಇಲಾಖೆಯಲ್ಲಿ ರಾಜ್ಯಾದ್ಯಂತ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ಒಂದು ತಿಂಗಳಲ್ಲಿ 800 ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ ಗುಂಡೂರಾವ್ ತಿಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಖಾಲಿ ಇರುವ ಎಂಬಿಬಿಎಸ್, ಎಂಡಿ 1500 ಹುದ್ದೆಗಳನ್ನು ಸಹ ಶೀಘ್ರದಲ್ಲಿ ಭರ್ತಿ ಮಾಡಲಾಗುವುದು. ಇದರ ಜತೆಗೆ ತಾಲೂಕು ಆಸ್ಪತ್ರೆಗಳಿಗೆ ಸ್ಪೆಷಲಿಸ್ಟ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದ್ದು, ಆ ಕಾರ್ಯ ಸಹ ತ್ವರಿತವಾಗಿ ನಡೆಯಲಿದೆ. ಉಳಿದಂತೆ ಲ್ಯಾಬ್ ಟೆಕ್ನಿಷಿಯನ್, ಗ್ರುಪ್ ಡಿ, ನರ್ಸ್ , ಪ್ಯಾರಾ ಮೆಡಿಕಲ್ ಹುದ್ದೆಗಳನ್ನು ಸಹ ಭರ್ತಿ ಮಾಡಲಾಗುವುದು ಎಂದರು.
ಧಾರವಾಡ ಜಿಲ್ಲಾ ಆಸ್ಪತ್ರೆ ಅಭಿವೃದ್ಧಿ ಕಾರ್ಯ ನಿರಂತರವಾಗಿದೆ. ಇನ್ನೂ ಕೆಲ ಸೌಲಭ್ಯಗಳು ಹಾಗೂ ಹೆಚ್ಚುವರಿ ಅಭಿವೃದ್ಧಿ ಕಾರ್ಯಕ್ಕೆ 9 ಕೋಟಿ ರೂ. ಅನುದಾನದ ಪ್ರಸ್ತಾವ ಸಲ್ಲಿಸಿದ್ದಾರೆ. ಹೀಗಾಗಿ ಅನುದಾನ ಬಿಡುಗಡೆಗೆ ಮಾಡಲಾಗುವುದು. ಸದ್ಯ ಇರುವ ವ್ಯವಸ್ಥೆಯನ್ನು ಉತ್ತಮವಾಗಿ ಇರುವಂತೆ ನೋಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸಮಗ್ರ ಯೋಜನೆ ರೂಪಿಸಿ ಸಂಪೂರ್ಣ ನೂತನ ಕಟ್ಟಡ ನಿರ್ಮಾಣಕ್ಕೆ ಚಿಂತಿಸಲಾಗುವುದು. ಜಿಲ್ಲಾ ಆಸ್ಪತ್ರೆ ಮಾತ್ರವಲ್ಲದೆ, ತಾಲೂಕಿನ ಎಲ್ಲ ಆಸ್ಪತ್ರೆಗಳ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಿ ಅಗತ್ಯ ಅನುದಾನ ನೀಡಲಾಗುವುದು. ಇದರ ಜತೆಗೆ ಸಿಬ್ಬಂದಿ ನೇಮಕಕ್ಕೂ ಆದ್ಯತೆ ನೀಡಲಾಗುವುದು. ಅದರಿಂದ ಹೆಚ್ಚಿನ ಜನರು ಆಸ್ಪತ್ರೆಗೆ ಬರಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net