ಶಿಕ್ಷಣ ಇಲಾಖೆ ಸಿಬ್ಬಂದಿ ನೇಮಕಕ್ಕೆ ಕ್ರಮ

MDG-1P1
ಮೂಡಿಗೆರೆ ತಾಪಂನಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಶಿಕ್ಷಕರೊಂದಿಗೆ ನಡೆಸಿದ ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿದರು.
Published on

ಮೂಡಿಗೆರೆ: ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಶೀಘ್ರದಲ್ಲಿಯೇ ಪರಿಹರಿಸಿ ಉತ್ತಮ ಆಡಳಿತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಹೇಳಿದರು.

ಗುರುವಾರ ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆಯಲ್ಲಿ ತಾಪಂನಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಶಿಕ್ಷಕರೊಂದಿಗೆ ನಡೆಸಿದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಲಸದ ಒತ್ತಡದಿಂದಾಗಿ ಮನನೊಂದು ಶಿಕ್ಷಣ ಇಲಾಖೆ ವ್ಯವಸ್ಥಾಪಕ ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ. ಇಂಥ ಘಟನೆಗಳು ಮರುಕಳಿಸಬಾರದು. ಶಿಕ್ಷಕರಲ್ಲಿದ್ದ ಗೊಂದಲ ನಿವಾರಿಸಲಾಗಿದೆ. ನಿರ್ಭಯದಿಂದ ಕೆಲಸ ಮಾಡಲು ನೌಕರರಿಗೆ ಸೂಚಿಸಲಾಗಿದೆ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಗೆ ಆಗಾಗ ಬಂದಂಥ ಹೊರಗಿನವರನ್ನು ವಿಚಾರಣೆಗೊಳಪಡಿಸಿ ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತರಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಸಭೆಯಲ್ಲಿ ಕೆಲ ಶಿಕ್ಷಕರು ಅಳಲು ತೋಡಿಕೊಂಡರು. ಶಾಸಕಿ ಹಾಗೂ ಜಿಪಂ ಸಿಇಒ ಇರುವುದನ್ನು ಲೆಕ್ಕಿಸದೆ ಕೆಲ ಶಿಕ್ಷಕರು ಒಬ್ಬರ ವಿರುದ್ಧ ಒಬ್ಬರು ಆರೋಪ ಮಾಡುತ್ತ ಜಗಳವಾಡಿದರು. ತಪ್ಪು ಮಾಡದಿದ್ದರೆ ಯಾರೂ ಭಯಪಡುವುದು ಬೇಡ. ಮಾಹಿತಿ ಹಕ್ಕು ಅರ್ಜಿ ಹಾಕಲು ಎಲ್ಲರಿಗೂ ಅವಕಾಶವಿದೆ. ಆದರೆ ಅದರ ಹೆಸರಿನಲ್ಲಿ ಬ್ಲಾೃಕ್ ಮೇಲ್ ಹಾಗೂ ಕಿರುಕುಳ ಕೊಡುವುದು ತಪ್ಪು. ಅಂಥವರಿಂದ ತೊಂದರೆ ಎದುರಾದರೆ ದೂರು ನೀಡಿ. ಇಲ್ಲವಾದರೆ ನನ್ನ ಗಮನಕ್ಕೆ ತರಬೇಕು. ಸುಮ್ಮನಾದರೆ ಪ್ರಾಮಾಣಿಕ ಅಧಿಕಾರಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಶಿಕ್ಷಕರೆಲ್ಲರೂ ಅಳುಕು ಬಿಟ್ಟು, ಒಗ್ಗಟ್ಟಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಯಾವ ಸಮಸ್ಯೆಯೂ ಬರುವುದಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಹಾಗೂ ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಹೇಳಿ ಸಮಾಧಾನಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net