

ಹುಳಿಯಾರು: ಇನ್ನೆರಡು ವರ್ಷದಲ್ಲಿ ಜಿಲ್ಲೆಯಲ್ಲಿ ಎಲ್ಲೂ ರೈಲ್ವೆ ಗೇಟ್ಗಳು ಇಲ್ಲದಂತೆ ಮಾಡಿ, ರೈಲು ಮತ್ತು ಇತರ ವಾಹನಗಳು ತಡೆರಹಿತವಾಗಿ ಓಡಾಡುವಂತೆ ಕ್ರಮವಹಿಸಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಹುಳಿಯಾರು ಅಂಬೇಡ್ಕರ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ನನೆಗುದಿಗೆ ಬಿದ್ದಿರುವ ಜಿಲ್ಲೆಯಲ್ಲಿ ಹಾದು ಹೋಗುವ ರೈಲ್ವೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಸಲಾಗಿದೆ. ನಿಂತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಆರಂಭಿಸಲಾಗಿದೆ. ಗುಬ್ಬಿಯಿಂದ ತುಮಕೂರು ರಸ್ತೆಯನ್ನು ಬೆಂಗಳೂರಿನ ಎಂಜಿ ರಸ್ತೆ ರೀತಿ ಅಭಿವೃದ್ಧಿಪಡಿಸಲಾಗುವುದು. ಶಿರಾದಿಂದ ಕೆ.ಬಿ.ಕ್ರಾಸ್ವರೆಗಿನ ಬುಕ್ಕಾಪಟ್ಟಣ ಮಾರ್ಗವಾಗಿ ರಸ್ತೆ ಅಭಿವೃದ್ಧಿಗೆ ಕೈಹಾಕಿದ್ದೇನೆ ಎಂದು ಸೋಮಣ್ಣ ಹೇಳಿದರು.
ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಕೆ.ಪುರಂದರ, ತಾಪಂ ಇಒ ದೊಡ್ಡಸಿದ್ಧಯ್ಯ, ಪಪಂ ಅಧ್ಯೆ ರತ್ನಮ್ಮ, ಉಪಾಧ್ಯೆ ಕಾವ್ಯರಾಣಿ, ಸಹಾಯಕ ಕೃಷಿ ಅಧಿಕಾರಿ ಶಿವರಾಜ್ ಕುಮಾರ್, ಸಿಡಿಪಿಒ ಹೊನ್ನಪ್ಪ, ಪಶು ಇಲಾಖೆಯ ಸಹಾಯಕ ನಿರ್ದೇಶಕ ರೆ.ಮಾ.ನಾಗಭೂಷಣ್ ಇದ್ದರು.
ಒಂದೇ ಗಂಟೆಯಲ್ಲಿ ಹಾಸನದಿಂದ ಹಿರಿಯೂರಿಗೆ
ಹಾಸನದಿಂದ ಹಿರಿಯೂರಿಗೆ ಕೇವಲ 1 ಗಂಟೆಯಲ್ಲಿ ಪ್ರಯಾಣಿಸುವ ಎಕ್ಸ್ಪ್ರೆಸ್ ಹೈವೇಗೆ ಹಣ ಬಿಡುಗಡೆ ಮಾಡಿಸಿದ್ದೇನೆ. ಪುಣೆಯಿಂದ ತುಮಕೂರು ಜಿಲ್ಲೆ ಮಾರ್ಗವಾಗಿ ಬೆಂಗಳೂರಿಗೆ 55 ಸಾವಿರ ಕೋಟಿ ರೂ. ವೆಚ್ಚದ ಹೈವೇ ಕಾಮಗಾರಿ ಮಂಜೂರು ಮಾಡಿಸಲಾಗಿದೆ ಎಂದು ಸೋಮಣ್ಣ ವಿವರಿಸಿದರು.
ಹೇಮಾವತಿ ನಾಲೆ ದುರಸ್ತಿಗೆ 125 ಕೋಟಿ ರೂ.ಕೊಡಿ
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ, ಹೋಬಳಿಮಟ್ಟದಲ್ಲಿ ಸಂಸದರೊಬ್ಬರು ಜನ ಸಂಪರ್ಕ ಸಭೆ ನಡೆಸುತ್ತಿರುವುದು ಇದೇ ಮೊದಲು. ಸಂಸದರು ಚಿಕ್ಕನಾಯಕನಹಳ್ಳಿ ೇತ್ರದ ಮೇಲೆ ವಿಶೇಷ ಕಾಳಜಿ ಇಟ್ಟುಕೊಂಡಿರುವುದರಿಂದ ಇಲ್ಲಿ ನೀರಿನ ಸಮಸ್ಯೆ ತಲೆದೋರಲಾರದು. ತಾಲೂಕಿನಲ್ಲಿ ಸಾಮಾಜಿಕ ಪಿಂಚಣಿಗೆ ಯಾವ ಅರ್ಜಿಗಳೂ ಬರುತ್ತಿಲ್ಲ. ಬಂದರೂ ಸಹ ವಾರದೊಳಗೆ ಮಂಜೂರು ಮಾಡಿಸುತ್ತಿದ್ದೇವೆ. ಬಗರ್ ಹುಕುಂನ 2 ಸಾವಿರ ಅರ್ಜಿಗಳನ್ನು ಈಗಾಗಲೇ ವಿಲೇ ಮಾಡಿದ್ದೇವೆ. ಇನ್ನೂ 27 ಸಾವಿರ ಅರ್ಜಿಗಳು ಬಾಕಿ ಇದ್ದು, 6 ತಿಂಗಳೂಳಗೆ ಅರ್ಹರಿಗೆ ಸಾಗುವಳಿ ಚೀಟಿ ಕೊಡುತ್ತೇವೆ. ತಾಲೂಕಿಗೆ ಹರಿಯುತ್ತಿರುವ ಹೇಮಾವತಿ ನಾಲೆ ದುರಸ್ತಿ ಮಾಡಲು 125 ಕೋಟಿ ರೂ. ಅನುದಾನ ಅಗತ್ಯವಿದ್ದು, ಸಚಿವರು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಬಾಬಣ್ಣನಂತೆ ಎಲ್ಲ ಎಂಎಲ್ಎಗಳು ಕೆಲಸ ಮಾಡಲಿ
ಮಧುಗಿರಿಯಲ್ಲಿ ಜನಸ್ಪಂದನಾ ಸಭೆ ಮಾಡಿದ್ದಾಗ ಸಾವಿರಾರು ಜನ ಸಮಸ್ಯೆ ಹೇಳಿಕೊಂಡು ಬಂದಿದ್ದರು. ಆದರೆ ಇಲ್ಲಿ ಜನರೇ ಇಲ್ಲ. ಕಾರಣ ಕೇಳಿದರೆ ಶಾಸಕರು ಪ್ರತಿ ವಾರ ಜನಸ್ಪಂದನ ಸಭೆ ನಡೆಸುತ್ತಿದ್ದು ಇಲ್ಲಿಯವರೆಗೆ 52 ಸಭೆ ಮಾಡಿ, ಜನರ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಹಾಗಾಗಿ ಹುಳಿಯಾರು ಜನಸ್ಪಂದನಕ್ಕೆ ಜನ ಬಂದಿಲ್ಲ ಎಂದರು. ಎಲ್ಲ ಎಂಎಲ್ಎಗಳೂ ಬಾಬಣ್ಣನ ರೀತಿ ಕೆಲಸ ಮಾಡಿದರೆ ರಾಜ್ಯದಲ್ಲಿ ಸಮಸ್ಯೆಗಳೇ ಇರುವುದಿಲ್ಲ. ಅಲ್ಲದೆ ಅಧಿಕಾರಿಗಳು, ಜನರು ಹಾಗೂ ಜನಪ್ರತಿನಿಧಿಗಳ ನಡುವೆ ಕಂದಕ ಸೃಷ್ಟಿಯಾಗುವುದಿಲ್ಲ. ಮುಖ್ಯವಾಗಿ ಮಧ್ಯವರ್ತಿ ಹಾಗೂ ಲಂಚ ತಡೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಅವರು ಜನಸ್ಪಂದನಾ ಕಾರ್ಯಕ್ರಮವನ್ನು ಸಚಿವ ಸೋಮಣ್ಣ ಶ್ಲಾಸಿದರು.
ಜೆಜೆಎಂ ಬಗ್ಗೆ ಕಂಪ್ಲೇಟ್ ಬಂದರೆ ಸುಮ್ಮನಿರಲ್ಲ
ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ರಾಜ್ಯದ ನೀರಾವರಿ ಯೋಜನೆಗಳು ಹಾಗೂ ಜೆಜೆಎಂ ಅನುಷ್ಠಾನದ ಜವಾಬ್ದಾರಿ ವಹಿಸಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅನೇಕ ಜೆಜೆಎಂ ಕಾಮಗಾರಿಗಳ ಬಗ್ಗೆ ದೂರು ಬರುತ್ತಿದೆ. ಪೈಪ್ಲೈನ್ ಅಳವಡಿಸಲು ಸಿಸಿ ರೋಡ್ ಅಗೆದಿದ್ದನ್ನು ಮುಚ್ಚದಿರುವುದು, ಹಳೆಕಾಲದ ಕೊಳವೆಬಾವಿ, ಟ್ಯಾಂಕ್ಗೆ ಇದಕ್ಕೂ ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಇದೆ. ಹಳ್ಳಿಹಳ್ಳಿಗಳಿಗೆ ಖುದ್ದು ತೆರಳಿ ಕಾಮಗಾರಿ ಗುಣಮಟ್ಟ ವೀಸಿ, ಇನ್ನು ಮುಂದೆ ಕಂಪ್ಲೇಟ್ ಬಂದರೆ ಸುಮ್ಮನಿರಲ್ಲ. ತಾಲೂಕಿಗೆ ನೀರು ಕೊಡುವ ಪುಣ್ಯದ ಕೆಲಸ ಸಿಕ್ಕಿದೆ ಶ್ರದ್ಧೆಯಿಂದ ಮಾಡಿ ಎಂದು ತಾಪಂ ಇಒ ದೊಡ್ಡಸಿದ್ದಯ್ಯ ಅವರಿಗೆ ಸಚಿವ ಸೋಮಣ್ಣ ತಾಕೀತು ಮಾಡಿದರು.
ಡಿವೈಡರ್ ಲೈಟ್ ಆಫ್ ಆದರೆ ಎತ್ತಂಗಡಿ
ಹುಳಿಯಾರು ಪಟ್ಟಣದಲ್ಲಿ ನೆನಗುದಿಗೆ ಬಿದ್ದಿದ್ದ ಹೈವೆ ಡಿವೈಡರ್ನಲ್ಲಿ ಸ್ಟ್ರೀಟ್ ಲೈಟ್ ಅಳವಡಿಸುವ ಕಾಮಗಾರಿ ಮುಗಿಸಿ ಇಂದು ನಾನೇ ಉದ್ಘಾಟಿಸಿದ್ದೇನೆ. ತಿಂಗಳಿಗೆ ಒಂದರಿಂದ ಒಂದೂವರೆ ಲಕ್ಷ ಬಿಲ್ ಬರುತ್ತದೆ. ಪಟ್ಟಣ ಪಂಚಾಯಿತಿಗೆ ಇದೇನೂ ಹೊರೆಯಲ್ಲ. ನಿಮಗೆ ಕಟ್ಟಲು ಸಾಧ್ಯವಾಗಲಿಲ್ಲ ಎಂದರೆ ನನ್ನನ್ನು ಕೇಳಿ ಕೊಡುತ್ತೇನೆ. ಆದರೆ ಯಾವ ಕಾರಣಕ್ಕೂ ಸ್ಟ್ರೀಟ್ಲೈಟ್ ಆಫ್ ಮಾಡಲು ಬಿಡಬೇಡಿ. ಒಂದು ವೇಳೆ ಆಫ್ ಆದರೆ ದೇವರಾಣೆ ಹೇಳ್ತಿನಿ ಕೇಳಿ..... ನಿಮ್ಮನ್ನು ಎತ್ತಂಗಡಿ ಮಾಡಿಸುತ್ತೇನೆ ಎಂದು ಪಪಂ ಮುಖ್ಯಾಧಿಕಾರಿ ನಾಗಭೂಷಣ್ಗೆ ಸಚಿವರು ಎಚ್ಚರಿಕೆ ನೀಡಿದರು.
ದೇಶಕ್ಕೆ ತುಮಕೂರು ಮಾದರಿಯಾಗಿಸುವೆ
ಸಂಸತ್ ಚುನಾವಣೆಯಲ್ಲಿ ನಾನು ದಿಕ್ಕುತಪ್ಪಿದ್ದೆ. ಹೋದ ಕಡೆಯಲ್ಲಿ ನಾನು ಹೊರಗಿನವನು, ಗೆದ್ದ ಮೇಲೆ ಜಿಲ್ಲೆ ಕಡೆ ತಿರುಗಿ ನೋಡಲ್ಲ, ಹೀಗೆ ಒಂದೊಂದು ಕಡೆ ಒಂದೊಂದು ರೀತಿ ಜಾಪಾಳ ಮಾತ್ರೆ ಹಾಕುತ್ತಿದ್ದರು. ಈ ಅಪಪ್ರಚಾರಕ್ಕೆ ಕಿವಿ ಕೊಡದೆ ಪಕ್ಷ, ಜಾತಿ ನೋಡದೆ ಎಲ್ಲರೂ ಇವ ನಮ್ಮವ ಇವ ನಮ್ಮವ ಎಂದು ಮತ ಹಾಕಿದ್ದೀರಿ. ನಾನೂ ಸಹ ಜಾತಿ, ಪಕ್ಷ ನೋಡದೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ದೇಶದಲ್ಲೇ ತುಮಕೂರು ಜಿಲ್ಲೆಯನ್ನು ಮಾದರಿ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.