ರೆಡ್ಡಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ

BLY- 19-4
ಬಳ್ಳಾರಿ ನಗರದ ಬಿಡಿಎಎ ಮೈದಾನದಲ್ಲಿರುವ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಉದ್ಘಾಟಿಸಿದರು. ಶಾಸಕ ನಾರಾ ಭರತ್‌ರೆಡ್ಡಿ , ಪಾಲಿಕೆ ಮೇಯರ್ ಬಿ.ಶ್ವೇತಾ, ಉಪ ಮೇಯರ್ ಬಿ.ಜಾನಕಿ, ರೆಡ್ಡಿ ಜನಸಂಘದ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮತ್ತಿತರರಿದ್ದರು.
Published on

ಬಳ್ಳಾರಿ : ರೆಡ್ಡಿ ಸಮುದಾಯ ಬಹಳ ಶ್ರೀಮಂತಿಕೆ ಹೊಂದಿರುವ ಸಮುದಾಯ. ರಾಜ್ಯಕ್ಕೆ ಅವರದ್ದೇ ಆದ ಶೈಲಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ. ಅವರ ಕ್ಷೇಮಾಭಿವೃದ್ಧಿಗೆ ರೆಡ್ಡಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ನಗರದ ಬಿಡಿಎಎ ಮೈದಾನದಲ್ಲಿರುವ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೆಡ್ಡಿ ಜನ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಸಮುದಾಯಗಳನ್ನು ಒಟ್ಟಿಗೆ ತಗೆದುಕೊಂಡು ಹೋಗಬೇಕಿದೆ. ಸಹಾಯ, ಸಹಕಾರಕ್ಕೆ ರೆಡ್ಡಿ ಸಮುದಾಯ ಎಂದಿಗೂ ಮುಂಚೂಣಿಯಲ್ಲಿ ಇರುತ್ತದೆ. ಅವರೊಂದಿಗೆ ಸರ್ಕಾರ ಎಂದಿಗೂ ಜತೆಗಿರುತ್ತದೆ. ರೆಡ್ಡಿ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಶಾಸಕ ನಾರಾ ಭರತ್‌ರೆಡ್ಡಿ ನೇತೃತ್ವದಲ್ಲಿ ಎಲ್ಲರೂ ಸಿಎಂ ಬಳಿ ಮನವಿ ಮಾಡಲಾಗುವುದು ಎಂದರು.

ಅಲ್ಲದೆ ತಾಳೂರು ರಸ್ತೆಗೆ ವೇಮನರ ಹೆಸರು ನಾಮಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಒಣ ಮೆಣಸಿನಕಾಯಿ ಮಾರುಕಟ್ಟೆಗೆ ಹೇಮರಡ್ಡಿ ಮಲ್ಲಮ್ಮ ಹೆಸರು ಇಡುವುದಾಗಿ ಭರವಸೆ ನೀಡಿದರು. ರೆಡ್ಡಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ವೈಯಕ್ತಿಕವಾಗಿ 15 ಲಕ್ಷ ರೂ. ನೀಡುವುದಾಗಿ ತಿಳಿಸಿದರು.

ಶಾಸಕ ನಾರಾ ಭರತ್‌ರೆಡ್ಡಿ ಮಾತನಾಡಿ, ರೆಡ್ಡಿ ಸಮುದಾಯ ಅತ್ಯಂತ ಭರವಸೆಯ ಸಮುದಾಯವಾಗಿದ್ದು, ಕೃಷಿಯೊಂದಿಗೆ ಅವರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಬಳ್ಳಾರಿ ಮತ್ತು ಅನಂತಪುರ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರೆಡ್ಡಿ ಜನ ಸಂಘದ ಕಚೇರಿಯ ಕಾಂಪೌಂಡ್ ನಿರ್ಮಾಣಕ್ಕಾಗಿ ಶಾಸಕರ ಅನುದಾನದಡಿ 20 ಲಕ್ಷ ರೂ. ನೀಡಲಾಗಿದೆ, ಅದಲ್ಲದೆ ರೆಡ್ಡಿ ಜನಸಂಘದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಯಾಣ ಮಂಟಪಕ್ಕೆ ವೈಯಕ್ತಿಕವಾಗಿ 50 ಲಕ್ಷ ರೂ. ನೀಡುವುದಾಗಿ ತಿಳಿಸಿದರು.

ಪಾಲಿಕೆ ಮೇಯರ್ ಬಿ.ಶ್ವೇತಾ, ಉಪ ಮೇಯರ್ ಬಿ.ಜಾನಕಿ, ರೆಡ್ಡಿ ಜನಸಂಘದ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಡಿಸಿ ಮಹಮ್ಮದ್ ಜುಬೇರ್, ಸಹಾಯಕ ಆಯುಕ್ತ ಹೇಮಂತ್, ಪಾಲಿಕೆ ಸದಸ್ಯರಾದ ರಾಜೇಶ್ವರಿ, ಕಲ್ಪನಾ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net