ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ

ಬೆಂಗಳೂರು ಉತ್ತರ ತಾಲೂಕಿನ ನಗರೂರು ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದಲ್ಲಿ ವಿಶ್ವ ಗಾಣಿಗರ ಚಾರಿಟಬಲ್ ಟ್ರಸ್ಟ್‌ನಿಂದ ಅಯೋಜಿಸಿದ್ದ ದ್ವಿತೀಯ ವರ್ಷದ ಪೀಠಾರೋಹಣ ಮಹೋತ್ಸವ, ಶಾಲೆ, ಪ್ರಸಾದ ಕಟ್ಟಡ ಉದ್ಘಾಟನೆ ಹಾಗೂ ಗಾಣಿಗರ ಹಬ್ಬಕ್ಕೆ ಸಚಿವರಾದ ಎಚ್.ಕೆ.ಪಾಟೀಲ್, ಸಚಿವ ದಿನೇಶ್‌ಗುಂಡೂರಾವ್ ಚಾಲನೆ ನೀಡಿದರು. ಶ್ರೀಪೂರ್ಣಾನಂದಪುರಿ ಸ್ವಾಮೀಜಿ ಇದ್ದರು.
ಬೆಂಗಳೂರು ಉತ್ತರ ತಾಲೂಕಿನ ನಗರೂರು ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದಲ್ಲಿ ವಿಶ್ವ ಗಾಣಿಗರ ಚಾರಿಟಬಲ್ ಟ್ರಸ್ಟ್‌ನಿಂದ ಅಯೋಜಿಸಿದ್ದ ದ್ವಿತೀಯ ವರ್ಷದ ಪೀಠಾರೋಹಣ ಮಹೋತ್ಸವ, ಶಾಲೆ, ಪ್ರಸಾದ ಕಟ್ಟಡ ಉದ್ಘಾಟನೆ ಹಾಗೂ ಗಾಣಿಗರ ಹಬ್ಬಕ್ಕೆ ಸಚಿವರಾದ ಎಚ್.ಕೆ.ಪಾಟೀಲ್, ಸಚಿವ ದಿನೇಶ್‌ಗುಂಡೂರಾವ್ ಚಾಲನೆ ನೀಡಿದರು. ಶ್ರೀಪೂರ್ಣಾನಂದಪುರಿ ಸ್ವಾಮೀಜಿ ಇದ್ದರು.
Published on

ಸಚಿವ ಎಚ್.ಕೆ.ಪಾಟೀಲ್ ಅಭಯ-ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶಿಕ್ಷಣ ಅವಶ್ಯ

ನೆಲಮಂಗಲ: ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಾಧ್ಯವಿದ್ದು, ಗಾಣಿಗ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಮುದಾಯದ ಶ್ರೇಯಸ್ಸಿಗಾಗಿ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರದ ಹಂತದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವುದಾಗಿ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಭರವಸೆ ನೀಡಿದರು.

ಬೆಂಗಳೂರು ಉತ್ತರ ತಾಲೂಕಿನ ನಗರೂರು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನಮಠದಲ್ಲಿ ವಿಶ್ವ ಗಾಣಿಗರ ಚಾರಿಟಬಲ್ ಟ್ರಸ್ಟ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ಪೀಠಾರೋಹಣ ಮಹೋತ್ಸವ, ಶಾಲೆ, ಪ್ರಸಾದ ಕಟ್ಟಡ ಉದ್ಘಾಟನೆ ಹಾಗೂ ಗಾಣಿಗರ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜದಲ್ಲಿ ಬೆವರು ಸುರಿಸಿದವರಿಗೆ ಎಂದೂ ಸಂಪತ್ತು ಲಭಿಸುವುದಿಲ್ಲ. ಮಧ್ಯವರ್ತಿಗಳಿಗೆ, ಜನರ ಶೋಷಣೆ ಮಾಡುವವರಿಗೆ ಬೇಗ ಸಂಪತ್ತು ಲಭಿಸುವ ಕಾಲ ಇದಾಗಿದೆ. ಹಾಗಾಗಿ ಗಾಣಿಗ ಸಮುದಾಯದ ಯುವಕರು ಕನಿಷ್ಠ ಪಿಯುಸಿಯನ್ನಾದರೂ ಉತ್ತೀರ್ಣರಾಗಲು ಪ್ರೇರೇಪಿಸಬೇಕು. ಗಾಣಿಗರು ಕೇವಲ ವೃತ್ತಿ ಬದುಕಿಗೆ ಸಿಮಿತರಾಗದೆ ಉದ್ಯಮ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಮಾನಸಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಗಾಣಿಗ ಸಮುದಾಯದ ಏಳಿಗೆಗೆ ರಾಜಕೀಯ ಜೀವನವನ್ನೇ ತೊರೆದು ದೂರದೃಷ್ಟಿ ಹಾಗೂ ತ್ಯಾಗ ಮನೋಭಾವದಿಂದ ಸನ್ಯಾಸತ್ವ ಸ್ವೀಕಾರ ಮಾಡಿರುವ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಮಾದರಿಯಾಗಿದ್ದಾರೆ. ಸಂಘ-ಸಂಸ್ಥೆ, ಶಾಲೆ, ವಿದ್ಯಾರ್ಥಿನಿಲಯಗಳನ್ನು ಆರಂಭಿಸುವ ಮೂಲಕ ಗಾಣಿಗ ಸಮುದಾಯವನ್ನು ಒಗ್ಗೂಡಿಸುವ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ ಡಾ.ಬಿ.ವಾಸಂತಿ ಅಮರ್, ಗಾಣಿಗ ಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎನ್.ವೇಣುಗೋಪಾಲ್, ಆಂಧ್ರಪ್ರದೇಶ ಮಾಜಿ ಎಂಎಲ್ಸಿ ಗೌನಿವಾರಿ ಶ್ರೀನಿವಾಸ್, ಮಾಜಿ ಶಾಸಕ ಡಿ.ಗೋಪಾಲ್, ಜಿಪಂ ಮಾಜಿ ಸದಸ್ಯ ಅಮರ್‌ನಾಥ್, ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್, ಜ್ಯೋತಿನಗರ ವೈಶ್ಯ ಗಾಣಿಗ ಸಂಘದ ಅಧ್ಯಕ್ಷ ವಿಜಯ್‌ಕುಮಾರ್, ವಿಶ್ವ ಗಾಣಿಗರ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ರಂಗರಾಜು, ಟ್ರಸ್ಟಿ ಓಬಳೇಶ್, ಯೋಗೇಶ್ ಇದ್ದರು.

ಮಠಗಳಿಂದ ಅಭಿವೃದ್ಧಿ ಸಾಧ್ಯ: ಅಧ್ಯಾತ್ಮದ ಜತೆ ಸಮಾಜ ಅಭಿವೃದ್ಧಿ ಹಾಗೂ ಜನರಿಗೆ ಸ್ಫೂರ್ತಿ ತುಂಬುವ ಕೆಲಸಗಳು ಮಠಮಾನ್ಯಗಳಿಂದ ನಿರಂತವಾಗಿ ನಡೆಯುತ್ತಿವೆ. ಗಾಣಿಗ ಸಮುದಾಯದ ಮೂಲವೃತ್ತಿಯಲ್ಲಿ ತೊಡಗಿಸಿಕೊಂಡವರು ಪ್ರಸ್ತುತ ತೀರಾ ಕಡಿಮೆ. ಹಾಗಾಗಿ ಸಮುದಾಯದ ಪರ ಸರ್ಕಾರಕ್ಕೆ ಧ್ವನಿ ಮುಟ್ಟಿಸಲು ವೇದಿಕೆ ಸಜ್ಜಾಗಿದೆ. ಸರ್ಕಾರವೂ ಹಿಂದುಳಿದ ವರ್ಗಗಳ ಧ್ವನಿಯಾಗಿ ಆಡಳಿತ ನಡೆಸುತ್ತಿದ್ದು, ಅವುಗಳ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ನಿರಂತವಾಗಿ ಮಾಡುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಅನುದಾನಕ್ಕೆ ಮನವಿ: ಹಿಂದುಳಿದ ಸಮುದಾಯಕ್ಕೆ ಶಕ್ತಿ ತುಂಬವ ಕೆಲಸ ಮಾಡಬೇಕಿದೆ. ಯಾಂತ್ರಿಕ ಯುಗದಲ್ಲಿ ಗಾಣಿಗರು ಮೂಲ ಕಸುಬು ಮರೆಯುತ್ತಿದ್ದಾರೆ. ಅರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಗಾಣಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಜತೆಗೆ ಕಳೆದ ಸರ್ಕಾರ ಶ್ರೀಮಠದ ಅಭಿವೃದ್ಧಿಗೆ 3.5 ಕೋಟಿ ರೂ. ಅನುದಾನ ಷಿಸಿದ್ದು, 2 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಉಳಿಕೆ 1.5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸಚಿವದ್ವಯರಲ್ಲಿ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಮನವಿ ಮಾಡಿದರು.3 ಪುಸ್ತಕ ಬಿಡುಗಡೆ: ವಿಧಾನ ಪರಿಷತ್ತಿನಲ್ಲಿ ಸದನ ಶೂರ ಬಿ.ಜೆ.ಪುಟ್ಟಸ್ವಾಮಿ, ಗಾಣಿಗ ಸೂರ್ಯ ಹಾಗೂ ಶ್ರೀಮಠದ ಕುರಿತು ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net