ಪೌರ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆಗೆ ಕ್ರಮ

Koppa meeting
ಕೊಪ್ಪ ಪಪಂ ತುರ್ತು ಸಭೆಯಲ್ಲಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಹೇಮಾವತಿ, ಸುಜಾತಾ, ಗಾಯತ್ರಿ, ಮೈತ್ರಾ ಇತರರಿದ್ದರು.
Published on

ಕೊಪ್ಪ: ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಪ್ರಸಕ್ತ ಸಾಲಿನಲ್ಲಿ ಸಾಧನೆ ಸಲಕರಣೆ ವಿತರಣೆ ಮಾಡಿಲ್ಲ. ಗಂಬೂಟ್, ಗ್ಲೌಸ್, ಮಾಸ್ಕ್, ಸಮವಸ್ತ್ರ ಮತ್ತಿತರ ಸಾಮಗ್ರಿಗಳನ್ನು ವಿತರಿಸುವ ಜತೆಗೆ ಆರೋಗ್ಯ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ತಿಳಿಸಿದರು.

ಬುಧವಾರ ಪಪಂನಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿ, ಆರೋಗ್ಯ ಕಿಟ್ ಮತ್ತು ಆರೋಗ್ಯ ತಪಾಸಣೆಗೆ ಸಾಕಾಗುವಷ್ಟು ಹಣ ಇದೆ. ಮುಂದಿನ ದಿನಗಳಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗುವುದು ಎಂದರು.
ಗಣೇಶ ಚತುರ್ಥಿಗೆ ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ಮಣ್ಣಿನಿಂದ ತಯಾರಿಸಿರಬೇಕು. ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಮನೆಗಳಲ್ಲಿ ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ಪಪಂ ಕಸದ ವಾಹನಕ್ಕೆ ನೀಡಬೇಕು ಎಂದರು.
2023-24ನೇ ಸಾಲಿಗೆ 15ನೇ ಹಣಕಾಸು ಅನುದಾನ, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ, ಎಸ್‌ಎಫ್‌ಸಿ ಯೋಜನೆ ಮತ್ತು ಪಟ್ಟಣ ಪಂಚಾಯತ್ ನಿಧಿಯ ಎಸ್‌ಸಿಎಸ್‌ಪಿ, ಟಿಎಸ್‌ಪಿ ಮತ್ತು ಶೇ.5ರ ಯೋಜನೆಗಳಿಗೆ ಕ್ರಿಯಾಯೋಜನೆ ತಯಾರಿಸಲಾಯಿತು. ವಿದ್ಯಾರ್ಥಿ ವೇತನ, ವಿದ್ಯಾನಗರ ಮತ್ತು ಇಂದಿರಾನಗರ ಸಮುದಾಯ ಭವನ ದುರಸ್ತಿ, ಘನತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಪೈಪ್ ಅಳವಡಿಕೆ, ರಸ್ತೆ ಅಭಿವೃದ್ಧಿ ಸೇರಿದಂತೆ ಒಟ್ಟು 25 ಲಕ್ಷ ರೂ. ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಲಾಯಿತು.
ಹೇಮಾವತಿ, ಸುಜಾತಾ ವಸಂತ, ರಶೀದ್, ಇದಿನಬ್ಬ, ಗಾಯತ್ರಿ ವಸಂತ, ಶ್ರೀನಿವಾಸ ಎಸ್. ಶೆಟ್ಟಿ, ವಿಜಯಕುಮಾರ್, ಗಾಯತ್ರಿ ಅಣ್ಣಪ್ಪ ಶೆಟ್ಟಿ, ಮೈತ್ರಾ ಗಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net