ಹೆಚ್ಚುವರಿ ಪರಿಹಾರ ವಿತರಣೆಗೆ ಕ್ರಮ

Visit
Published on

ಮುಂಡರಗಿ: ತಾಲೂಕಿನ ಬೀಡನಾಳ ಗ್ರಾಮದಲ್ಲಿ ಕುರಿ ಮತ್ತು ಆಡುಗಳು ಏಕಾಏಕಿ ಸಾವನ್ನಪ್ಪಿದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹಾಗೂ ಶಾಸಕ ಡಾ. ಚಂದ್ರು ಲಮಾಣಿ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಕುರಿಗಾರರು ಹಾಗೂ ಪಶು ಇಲಾಖೆ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, ಸರ್ಕಾರದಿಂದ ಪ್ರತಿ ಕುರಿ, ಆಡಿಗೆ 5 ಸಾವಿರ ರೂ. ಪರಿಹಾರ ನೀಡಲಾಗುತ್ತದೆ ಎಂದರು.

18 ಕುರಿಗಾರರಿಗೆ ಸಂಬಂಧಿಸಿದ ಒಟ್ಟು 173 ಕುರಿ, ಆಡು, ಟಗರು ಸಾವನ್ನಪ್ಪಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಕುರಿಗಾರರು ಮನವಿ ಸಲ್ಲಿಸಿದರು. ಕನಿಷ್ಠ 10ರಿಂದ 30 ಸಾವಿರ ರೂ.ವರೆಗೆ ಬೆಲೆ ಬಾಳುವ ಕುರಿ, ಆಡು, ಟಗರು ಸಾವನ್ನಪ್ಪಿವೆ. ಆದ್ದರಿಂದ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ ಮನವಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕುರಿ, ಆಡು ಸಾವಿನ ಬಗ್ಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಆದೇಶಿಸಲಾಗುವುದು. ಶ್ರಮಜೀವಿ ಕುರಿಗಾರರಿಗೆ ನಷ್ಟವಾಗಿದ್ದು, ಹೆಚ್ಚಿನ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.

ಎಸ್.ಪಿ. ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ತಹಸೀಲ್ದಾರ್ ಧನಂಜಯ್ ಎಂ., ಬೀಡನಾಳ ಗ್ರಾ.ಪಂ.ಅಧ್ಯಕ್ಷ ಕೊಪ್ಪಣ್ಣ ಕೊಪ್ಪಣ್ಣವರ, ಸುಜಾತಾ ದೊಡ್ಡಮನಿ, ವಾಸಣ್ಣ ಕುರಡಗಿ, ಹೇಮಗಿರೀಶ ಹಾವಿನಾಳ, ಡಿ.ಡಿ.ಮೋರನಾಳ, ಲಿಂಗರಾಜಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net