ಬಿ.ಆರ್.ಬೆಟ್ಟದಲ್ಲಿ ಸುಸಜ್ಜಿತ ದಾಸೋಹ ಭವನ ನಿರ್ಮಾಣಕ್ಕೆ ಕ್ರಮ

Oplus_131072
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿ ಭವನದ ಬಳಿ ಗುರುವಾರ ವೋಲ್ವೋ ಕಂಪನಿ ವತಿಯಿಂದ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿದರು. ಕಂಪನಿಯ ನಿರ್ದೇಶಕ ಜಿ.ವಿ. ರಾವ್ ಇತರರು ಇದ್ದರು.
Published on

ಯಳಂದೂರು: ಜಿಲ್ಲೆಯ ಪ್ರಸಿದ್ಧ ಪೌರಾಣಿಕ ಪುಣ್ಯಕ್ಷೇತ್ರ, ವಿಶಿಷ್ಟ ಪ್ರವಾಸಿ ತಾಣವಾಗಿರುವ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲ ಹಾಗೂ ಬೆಟ್ಟದ ಅಭಿವೃದ್ಧಿಗೆ ಅಧಿಕಾರಾವಧಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಬೆಟ್ಟದ ಬಿಳಿಗಿರಿ ಭವನ ಬಳಿ ವೋಲ್ವೋ ಕಂಪನಿ ವತಿಯಿಂದ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಿಎಸ್‌ಆರ್ ಫಂಡ್‌ನಿಂದ ಕಂಪನಿಗಳಿಗೆ ಬರುವ ಆದಾಯದ ಶೇ.2ರಷ್ಟನ್ನು ಇಂತಹ ಸಮಾಜಮುಖಿ ಕಾರ್ಯಗಳಿಗೆ ದಾನವಾಗಿ ನೀಡಬೇಕೆಂಬ ನಿಯಮ ಜಾರಿಗೆ ಬಂದಿತು. ಅಲ್ಲಿಂದ ಕಂಪನಿಗಳು ಇಂತಹ ಅನೇಕ ಜನಪರ ಕೆಲಸಗಳನ್ನು ಮಾಡುತ್ತ ಬಂದಿವೆ ಎಂದು ತಿಳಿಸಿದರು.

ದೇಶದಲ್ಲಿ 2023-24 ನೇ ಸಾಲಿನಲ್ಲಿ 29 ಸಾವಿರ ಕೋಟಿ ರೂ. ಇದಕ್ಕೆ ಬಳಕೆಯಾಗಿರುವ ಮಾಹಿತಿ ಇದೆ. ಬೆಟ್ಟದಲ್ಲಿ ವೋಲ್ವೋ ಕಂಪನಿಯವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಇದೇ ಯೋಜನೆಯಡಿ ನಿರ್ಮಿಸಿದ್ದಾರೆ. ಇದರಿಂದ ಸಾವಿರಾರು ಭಕ್ತರಿಗೆ, ಪ್ರವಾಸಿಗರಿಗೆ ಅನುಕೂಲವಾಗಲಿದೆ. ಬೆಟ್ಟದ ಮೆಟ್ಟಿಲು ನಿರ್ಮಾಣ ಸೇರಿದಂತೆ ಇತರ ಕಾರ್ಯಗಳಿಗೆ 4 ಕೋಟಿ ರೂ. ವಾಪಸ್ ಆಗಿತ್ತು. ಮತ್ತೆ ಈ ಹಣವನ್ನು ವಾಪಸ್ ತಂದು ಇದರ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇಲ್ಲಿಗೆ ಸುಸಜ್ಜಿತ ದಾಸೋಹ ಭವನ, ಪಾತ್‌ವೇ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಬೆಟ್ಟದಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ ನಿಲ್ದಾಣ ನಿರ್ಮಿಸಲು ಬಿಳಿಗಿರಿ ಭವನದ ಬಳಿ ಇರುವ ಜಮೀನನ್ನು ಸಾರಿಗೆ ನಿಗಮಕ್ಕೆ ನೀಡಲಾಗಿದ್ದು, ಆದಷ್ಟು ಬೇಗ ಈ ಕಾಮಗಾರಿಯೂ ಆರಂಭವಾಗಲಿದೆ. ಇದರೊಂದಿಗೆ ಯಳಂದೂರು ಪಟ್ಟಣ ಹಾಗೂ ಸಂತೇಮರಹಳ್ಳಿಯಲ್ಲೂ ನೂತನವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೂ ಕ್ರಮ ವಹಿಸಲಾಗುವುದು. ಗಿರಿಜನರಿಗೆ ನೀಡಿರುವ ಜಮೀನು ಅರಣ್ಯ ಇಲಾಖೆಗೆ ಸೇರಿಕೊಂಡಿದ್ದು ಇದನ್ನು ವಾಪಸ್ ಕೊಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.

ವೋಲ್ವೋ ಕಂಪನಿಯ ಸಿಎಸ್‌ಆರ್ ವಿಭಾಗದ ನಿರ್ದೇಶಕ ಜಿ.ವಿ. ರಾವ್ ಮಾತನಾಡಿ, ಬಿಳಿಗಿರಿಂಗನಬೆಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇವೆ. ಈಗಾಗಲೇ 33 ಘಟಕಗಳನ್ನು ಮಾಡಿದ್ದೇವೆ. ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಘಟಕ ನಿರ್ಮಾಣ ಮಾಡಲಾಗುವುದು. ಬಿಳಿಗಿರಿರಂಗನಬೆಟ್ಟದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ವಿಜ್ಞಾನ ಪ್ರಯೋಗಾಲಯವನ್ನು ನಿರ್ಮಿಸಲು ಸಂಸ್ಥೆ ತೀರ್ಮಾನಿಸಿದ್ದು ಆದಷ್ಟು ಬೇಗ ಇದನ್ನು ಮಾಡಲಿದ್ದೇವೆ ಎಂದರು.

ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಪ್ರಜ್ವಲ್ ಟ್ರಸ್ಟ್‌ನ ಅನಂತ್ ಮಾತನಾಡಿದರು. ದೇಗುಲದ ಇಒ ಮೋಹನ್‌ಕುಮಾರ್, ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೇತಮ್ಮ, ಗುಂಬಳ್ಳಿ ರಾಜಣ್ಣ, ಸಿದ್ದರಾಜು, ವೆಂಕಟರಾಮು, ವಿ. ನಾರಾಯಣಸ್ವಾಮಿ, ಸುರೇಶ್, ಎಸ್. ರವಿಕುಮಾರ್, ಪಿಎಸ್‌ಐ ಹನುಮಂತ ಉಪ್ಪಾರ್, ವೆಂಕಟೇಶ್ ನಿವೃತ್ತ ಶಿಕ್ಷಕ ಲಿಂಗರಾಜು, ರೂಪೇಶ್, ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net