ತಡೆಗೋಡೆ, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕ್ರಮ

SRP_02-02jpj
ಶ್ರೀರಂಗಪಟ್ಟಣದ ಲಾರ್ಡ್ ವೆಲ್ಲಸ್ಲಿ ಸೇತುವೆ ಬಳಿ ಉಂಟಾಗಿರುವ ಹಾನಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವೀಕ್ಷಿಸಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ ಇತರರಿದ್ದರು.ಅ
Published on

ಶ್ರೀರಂಗಪಟ್ಟಣ : ಶತಮಾನದ ಲಾರ್ಡ್ ವೆಲ್ಲೆಸ್ಲಿ ಸೇತುವೆ, ಕುಸಿದಿರುವ ಕಾವೇರಿ ನದಿಯ ತಡೆಗೋಡೆಗಳು ಹಾಗೂ ಕೊಚ್ಚಿಹೋಗಿರುವ ಸಂಪರ್ಕ ರಸ್ತೆ ನಿರ್ಮಾಣಕ್ಕೆ ರಾಜ ್ಯಸರ್ಕಾರ ಶೀಘ್ರ ಕ್ರಮ ವಹಿಸಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.

ಪಟ್ಟಣದ ಉತ್ತರ ಕಾವೇರಿ ನದಿಗೆ ಅಡ್ಡಲಾಗಿರುವ ವೆಲ್ಲೆಸ್ಲಿ ಸೇತುವೆ ಬಳಿ ಕಾವೇರಿ ಪ್ರವಾಹದಿಂದ ಉಂಟಾಗಿರುವ ಹಾನಿಯನ್ನು ಕ್ಷೇತ್ರದ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅವರೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ನಿರ್ದೇಶನ ನೀಡಿದರು.

ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಪುರಾತನ ವೆಲ್ಲೆಸ್ಲಿ ಸೇತುವೆ ಪಾರಂಪರಿಕ ಸ್ಮಾರಕವಾಗಿದ್ದು, ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪ್ರವಾಹದಿಂದ ಉಂಟಾಗಿರುವ ಹಾನಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇದರ ದುರಸ್ತಿ ಸೇರಿದಂತೆ ಇನ್ನಷ್ಟು ಸುಭದ್ರಗೊಳಿಸಲು ಜಿಲ್ಲಾಡಳಿತ 11.60 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಿದೆ. ಇದನ್ನು ಸಚಿವ ಸಂಪುಟದಲ್ಲಿ ಮುಂದಿಟ್ಟು ಸರ್ಕಾರದಿಂದ ಅನುಮತಿ ಪಡೆದು 15 ದಿನದೊಳಗಾಗಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಪ್ರವಾಹ ತಗ್ಗುವವರೆಗೆ ಹಾಗೂ ದುರಸ್ತಿ ಕಾಮಾಗಾರಿ ಮುಗಿಯುವರೆಗೆ ಈ ಸೇತುವೆ ಹಾಗೂ ಸಂಪರ್ಕ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರವನ್ನು ನಿರ್ಬಂಧಿಸಿ. ಅಲ್ಲದೆ ವಿದ್ಯುತ್ ಲೈನ್‌ಗಳ ಬಗ್ಗೆ ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರ ಸಮ್ಮುಖದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಹಾಗೂ ಲೋಕೋಪಯೋಗಿ ಎಇಇ ಜಸ್ವಂತ್ ಪಂಡಿತ್ ಹಾಗೂ ಸೆಸ್ಕ್ ಎಇಇ ಮಂಜುನಾಥ್ ಪ್ರಸಾದ್ ಅವರಿಗೆ ಸೂಚನೆ ನೀಡಿದರು.

ಬಳಿಕ ಪಶ್ಚಿಮವಾಹಿನಿ ಸೇರಿದಂತೆ ಇತರೆಡೆ ಪ್ರವಾಹ ವೀಕ್ಷಣೆ ನಡೆಸಿದ ಸಚಿವರು, ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳ ನದಿ ತೀರದಲ್ಲಿರುವ ಜನರನ್ನು ಕೆಲಕಾಲ ಪ್ರವಾಹ ತಗ್ಗುವವರೆಗೂ ಸ್ಥಳಾಂತರಕ್ಕೆ ಕ್ರಮ ಕೈಗೊಂಡು ಜನ-ಜಾನುವಾರುಗಳ ಸುರಕ್ಷತೆಗೆ ಇನ್ನಷ್ಟು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಪುರಸಭಾ ಸದಸ್ಯರಾದ ಎಂ.ಎಲ್.ದಿನೇಶ್, ದಯಾನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಪ್ರಕಾಶ್, ಲೋಕಸಭಾ ಪರಾಜಿತ ಅಭ್ಯರ್ಥಿ ಸ್ಟಾರ್ ಚಂದ್ರು, ಕಾಂಗ್ರೆಸ್ ಮುಖಂಡರಾದ ಲಾರಿ ರೇವಣ್ಣ, ಎಂ.ಲೋಕೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net