

ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ಅನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ನಾಗರಿಕರಿಗೆ ಅನುಕೂಲವಾಗುವ ರೀತಿ ಸೌಲಭ್ಯಗಳನ್ನು ಒದಗಿಸುವಂತೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸ್ವಾತಂತ್ರ್ಯ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಫ್ರೀಡಂ ಪಾರ್ಕ್ ನಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ವಾಯುವಿಹಾರಿಗಳ ನಡಿಗೆಗೆ ಸುಗಮ ಮಾರ್ಗ, ಸೂಕ್ತ ಭದ್ರತಾ ವ್ಯವಸ್ಥೆ ಸೇರಿ ವಿವಿಧ ರೀತಿಯ ಅಭಿವೃದ್ಧಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು.
ಕಿಡ್ಸ್ ಪಾರ್ಕ್ ನಿರ್ಮಿಸಿ:
ಉದ್ಯಾನವನಕ್ಕೆ ಆಗಮಿಸುವ ಮಕ್ಕಳ ಆಟೋಟಕ್ಕಾಗಿ ಕ್ರೀಡಾ ಉಪಕರಣಗಳೊಂದಿಗೆ ಹೊಸದಾಗಿ ಕಿರ್ಡ್ಸ್ ಪಾರ್ಕ್ ನಿರ್ಮಿಸಬೇಕು. ಉದ್ಯಾನವನಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಿ ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ಹೆಚ್ಚು ಸಸಿಗಳನ್ನು ನೆಟ್ಟು ಅವುಗಳ ಸರಿಯಾಗಿ ಪೋಷಣೆ ಮಾಡುವ ಜತೆಗೆ ಒಣಗಿದ ಹಾಗೂ ಅಪಾಯಕಾರಿ ಮರ, ರೆಂಬೆ/ ಕೊಂಬೆಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.
ಇದೇ ವೇಳೆ ಫ್ರೀಡಂ ಪಾರ್ಕ್ ಅಕ್ಕ ಪಕ್ಕದಲ್ಲಿನ ರಸ್ತೆಗಳನ್ನು ಪರಿಶೀಲಿಸಿದ ಅವರು, ರಸ್ತೆಬದಿಯಲ್ಲಿ ಎಳನೀರು ಮಾರಾಟ ಮಾಡುತ್ತಿರುವವರ ತೆಂಗಿನ ಚಿಪ್ಪುಗಳನ್ನು ಅಲ್ಲಿಯೇ ಬಿಡದೆ, ವಿಲೇವಾರಿ ಮಾಡಲು ಕ್ರಮ ವಹಿಸಬೇಕು. ಪಾದಚಾರಿ ಮಾರ್ಗಗಳ ಸರಿಯಾದ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಉದ್ಯಾನವನದ ಬದಿಯಲ್ಲಿರುವ ಬಹುಮಹಡಿ ವಾಹನ ನಿಲುಗಡೆ ಸ್ಥಳಕ್ಕೆ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಈ ಕಟ್ಟಡದ ಮೇಲ್ಭಾಗದಲ್ಲಿರುವ ಜಾಗವನ್ನು, ವಸ್ತುಪ್ರದರ್ಶನ ಮತ್ತು ಮಾರಾಟ ಹಾಗೂ ಇನ್ನಿತರ ವಾಣಿಜ್ಯ ಉದ್ದೇಶಕ್ಕೆ ಉಪಯೋಗ ಮಾಡಿಕೊಳ್ಳುವ ಮೂಲಕ ಪಾಲಿಕೆಗೆ ಆದಾಯ ಬರುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಕೇಂದ್ರ ಪಾಲಿಕೆಯ ಅಪರ ಆಯುಕ್ತ (ಅಭಿವೃದ್ಧಿ) ದಲ್ಜಿತ್ ಕುಮಾರ್, ಜಂಟಿ ಆಯುಕ್ತರಾದ ರಂಗನಾಥ್ ಮತ್ತು ಹೇಮಂತ್ ಶರಣ್, ಮುಖ್ಯ ಅಭಿಯಂತರರಾದ ವಿಜಯಕುಮಾರ್ ಹರಿದಾಸ್ ಮತ್ತು ಸುಗುಣಾ ಹಾಜರಿದ್ದರು.
ಕಟ್ಟಡ ತ್ಯಾಜ್ಯ ಸುರಿಯುವವರಿಗೆ ದಂಡ ವಿಧಿಸಿ:
ಕಟ್ಟಡ ನಿರ್ಮಾಣ ಹಂತದಲ್ಲಿರುವ ಕೆಲವು ಬಿಲ್ಡಿಂಗ್‌ನವರು ತ್ಯಾಜ್ಯ, ಕಬ್ಬಿಣ, ಜಲ್ಲಿಕಲ್ಲು, ಮರಳು ಇತರ ವಸ್ತುಗಳನ್ನು ರಸ್ತೆಯಲ್ಲಿ ಹಾಕಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅದನ್ನು ಕೂಡಲೇ ತೆರವುಗೊಳಿಸಲು ಹಾಗೂ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು.