

ಕೆಜಿಎಫ್- ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಕೊಠಡಿಗಳು ಸೇರಿ ಇತರ ಸೌಕರ್ಯಗಳನ್ನು ಕಲ್ಪಿಸಿಕೊಡಲು ಇಲಾಖಾ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಶಾಸಕಿ ರೂಪಕಲಾ ಶಶಿಧರ್ ಭರವಸೆ ನೀಡಿದರು.
ನಗರದ ಹೊರವಲಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ಲಭ್ಯವಿರುವ ಸೌಕರ್ಯಗಳ ಪರಿಶೀಲನೆ ನಡೆಸಿ ಮಾತನಾಡಿದರು.
ಕಾಲೇಜಿನ ಕೊಠಡಿಗಳ ನಿಮಾರ್ಣಕ್ಕೆ ಇಲಾಖೆಮಟ್ಟದಲ್ಲಿ ಮಾತುಕತೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೇ ಕಾಲೇಜಿಗೆ ಅಗತ್ಯ ಇತರ ಅಗತ್ಯ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಾಲೇಜಿನ ಬೋಧನಾ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಕಾಲೇಜಿನ ದೈನಂದಿನ ಚಟುವಟಿಕೆಗಳ ಬಗ್ಗೆ ಹಾಗೂ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸಿಬ್ಬಂದಿ ಮುಖ್ಯರಸ್ತೆಯಿಂದ ಕಾಲೇಜಿನವರೆಗೆ ಮಣ್ಣು ರಸ್ತೆ ಇದ್ದು, ಮಳೆಗಾಲದಲ್ಲಿ ಮಳೆ ಬಂತೆಂದರೆ, ವಿದ್ಯಾರ್ಥಿಗಳು ಕಾಲೇಜಿಗೆ ಬರುವುದಕ್ಕೆ ತೀರಾ ತೊಂದರೆಯಾಗಿದ್ದು, ಸಿಸಿ ರಸ್ತೆಯನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ, ಮುಖ್ಯ ರಸ್ತೆಯಿಂದ ಕಾಲೇಜಿನವರೆಗೆ ಸಿಸಿ ರಸ್ತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿ, ಕೂಡಲೇ ಸ್ಥಳದಲ್ಲಿ ಹಾಜರಿದ್ದ ಪೌರಾಯುಕ್ತರಿಗೆ ಸಿಸಿ ರಸ್ತೆ ನಿಮಾರ್ಣಕ್ಕೆ ಸಂಬಂಧಿಸಿದಂತೆ ಅಂದಾಜು ಪಟ್ಟಿ ತಯಾರು ಮಾಡಿ ಸಲ್ಲಿಸಲು ಸೂಚಿಸಿದರು.