

ವಿರಾಜಪೇಟೆ : ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ನಡೆಯುವ ಸಭೆಗಳಿಗೆ ಅಧಿಕಾರಿಗಳು ಗೈರಾದರೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿರಾಜಪೇಟೆ ತಹಸೀಲ್ದಾರ್ ರಾಮಚಂದ್ರ ಎಚ್ಚರಿಕೆ ನೀಡಿದರು.
ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿನ ಆಡಳಿತ ಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಬೇಸರ ಹೊರ ಹಾಕಿದರು.
ಇಂದಿನ ಸಭೆಯಲ್ಲಿ ಸರ್ವೇ ಇಲಾಖೆಯ ಎಡಿಎಲ್‌ಆರ್ ಸೇರಿದಂತೆ ಕೆಲವು ಅಧಿಕಾರಿಗಳು ಗೈರಾಗಿದ್ದರು. ಈ ಕುರಿತು ತಹಸೀಲ್ದಾರ್ ಅಕ್ಷೇಪಿಸಿದರು. ಇದು ಕನ್ನಡ ಕಾರ್ಯಕ್ರಮ. ನಮ್ಮ ನೆಲದ ಕಾರ್ಯಕ್ರಮ. ಅದನ್ನು ಅರಿತು ಕೊಳ್ಳದೆ ನಿರ್ಲಕ್ಷೃ ವಹಿಸಿದರೆ ಕನ್ನಡಕ್ಕೆ ಅಪಮಾನ ಮಾಡಿದಂತೆ ಎಂದು ಅಸಮಾಧಾನ ಹೊರ ಹಾಕಿದರು.
ಹಲವಾರು ಇಲಾಖೆಯ ಅಧಿಕಾರಿಗಳು ನಮಗೆ ಸೂಕ್ತ ಸಹಕಾರ ನೀಡುತ್ತಿಲ್ಲ. ಇದರಿಂದ ನಾನು ಹಾಗೂ ಪುರಸಭೆಯ ಮುಖ್ಯಧಿಕಾರಿ ಮಾತ್ರ ಹೊಣೆ ನಿಭಾಯಿಸುವಂತಾಗಿದೆ. ಇದು ವಿಪರ್ಯಾಸವಾಗಿದೆ. ಕನ್ನಡ ರಾಜ್ಯೋತ್ಸವ ದಿನ ರಜೆ ಇದ್ದರು ಕಾರ್ಯಕ್ರಮದಲ್ಲಿ ಅಧಿಕಾರಿಗಳು ತಪ್ಪದೆ ಭಾಗವಹಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಶಾಲಾ ವಿದ್ಯಾರ್ಥಿಗಳಿಗೆ ಸ್ವರ್ಧೆ ಆಯೋಜಿಸಿ ಕನ್ನಡಕ್ಕೆ ಹೆಚ್ಚು ಒತ್ತು ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. ಬೆಳಗ್ಗೆ ಶಾಲೆಗೆ ಬರುವ ಮಕ್ಕಳಿಗೆ ಲಘು ಉಪಹಾರ ವ್ಯವಸ್ಥೆ ಮಾಡಬೇಕು. ನಿರೂಪಕರು ಎಚ್ಚರಿಕೆ ವಹಿಸಬೇಕು. ಯಾವುದೇ ಪ್ರಮಾದವಾಗಬಾರದು ಎಂದು ತಿಳಿಸಿದರು.
ಕನ್ನಡ ಪುಸ್ತಕ ಮಳಿಗೆ ಸ್ಥಾಪನೆ, ಎಲ್ಲರ ಮನೆಯಲ್ಲೂ ಕನ್ನಡ ಬಾವುಟ ಹಾರಿಸುವುದು. ಅಂಗಡ, ಮುಂಗಟ್ಟುಗಳಲ್ಲಿ ಕನ್ನಡ ಭಾಷೆ ಬಳಕೆ ಮಾಡುವುದು. ಕನ್ನಡ ಭಾಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ಸಾಧಕರಿಗೆ ಸನ್ಮಾನ ಕುರಿತು ಸಭೆಯಲ್ಲಿ ವಿಷಯಗಳು ಚರ್ಚೆಯಾದವು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ, ಸರ್ಕಾರಿ ಅಭಿಯೋಜಕ ನರೇಂದ್ರ ಕಾಮತ್ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.