

ಕುಂದಾಪುರ: ಸರ್ವೇ ಪ್ರಕಾರ ಪರಿಶಿಷ್ಟ ಜಾತಿ ಸಮುದಾಯಕ್ಕೆ 4ರಿಂದ 5ಲಕ್ಷ ಮನೆ, ಹಕ್ಕುಪತ್ರ, ವಿದ್ಯುತ್, ಶೌಚಗೃಹ ಅವಶ್ಯವಿದೆ. ಎಲ್ಲರಿಗೂ ಉತ್ತಮ ಮನೆ ಆಗಬೇಕು ಎನ್ನುವ ಉದ್ದೇಶದಿಂದ ತಿದ್ದುಪಡಿಗೆ ತೀರ್ಮಾನಿಸಲಾಗಿದೆ. ಮುಂದಿನ ಸೋಮವಾರ ಮತ್ತೊಂದು ಸುತ್ತಿನ ಸಭೆ ಕರೆಯಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಅಭಿನಂದನಾ ಕಾರ‌್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಾಜ್ಯದಲ್ಲಿ 25 ಲಕ್ಷ ಕುಟಂಬ, 1.27 ಕೋಟಿ ಜನಸಂಖ್ಯೆ ಪರಿಶಿಷ್ಟ ಜಾತಿ ಸಮುದಾಯದಲ್ಲಿ ಇದೆ ಎಂದರು.
ಪ್ರತಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂನಲ್ಲಿರುವ ವಸತಿ ಹಾಗೂ ನಿವೇಶನರಹಿತರ ಸರ್ವೇ ನಂತರ ನಿರ್ದಿಷ್ಟ ಫಲಾನುಭವಿಗಳ ಸರಿಯಾದ ಪಟ್ಟಿ ಸಿಗಲಿದೆ. ಅವರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ಮಾಡಿಕೊಡಲು ನಿರ್ಧರಿಸಲಾಗಿದೆ. ಎಸ್‌ಸಿ ಎಸ್‌ಟಿ ಫಂಡ್ ಮೂಲಕ ಪರಿಶಿಷ್ಟ ಕಾಲನಿ ಸಂಪರ್ಕ ಸಹಿತ ಅಭಿವೃದ್ಧಿ, ಹಿಂದೆ ಎಸ್‌ಸಿ ಎಸ್‌ಟಿ ಅನುದಾನ ಬಳಸಿ ಸಾರ್ವಜನಿಕ ರಸ್ತೆ ಅಭಿವೃದ್ಧಿಗೊಳಿಸಿದ್ದು, ಈಗ ಆಗಿರುವ ರಸ್ತೆಗಳ ಸಮೀಕ್ಷೆ ಮಾಡಲು ಸೂಚಿಸಿದ್ದೇನೆ ಎಂದರು.
ಎಸ್‌ಸಿ ಎಸ್‌ಟಿ ಕಾಲನಿ ಸಮಸ್ಯೆ ಪರಿಶೀಲಿಸಲು ಕುಂದಾಪುರ ಅಂಬೇಡ್ಕರ್ ಕಾಲನಿಗೆ ಇನ್ನೆರಡು ದಿನದಲ್ಲಿ ಭೇಟಿ ನೀಡಲಾಗುವುದು ಕುಂದಾಪುರ ಅಂಬೇಡ್ಕರ್ ನಗರ ಮನೆಗಳ ಪೂರ್ಣಗೊಳಿಸಲು ಇಲಾಖೆಯಿಂದ ಆಗುವ ಅಗತ್ಯ ಕಾರ್ಯಗಳನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ ಖಾರ್ವಿ, ನಾಮ ನಿರ್ದೇಶಕ ಸದಸ್ಯೆ ಪುಷ್ಪಾ ಶೇಟ್, ಮಾಜಿ ಜಿಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಅವರು ಸಚಿವರನ್ನು ಅಭಿನಂದಿಸಿದರು.
ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಮಂಡಳಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ನಗರ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಬಿ., ದ.ಕ. ಬಿಜೆಪಿ ಸಹಾಯಕ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಸದಾನಂದ ಉಪ್ಪಿನಕುದ್ರು, ಮೀನುಗಾರಿಕಾ ಪ್ರಕೋಷ್ಠ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೋರು, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಕಳಂಜೆ, ಒಬಿಸಿ ಮೋರ್ಚಾ ಪ್ರಧಾನ ಕಾರ‌್ಯದರ್ಶಿ ವಿಠಲ ಪೂಜಾರಿ ಇದ್ದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸತೀಶ್ ಪೂಜಾರಿ ವಕ್ವಾಡಿ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ‌್ಯದರ್ಶಿ ಸುರೇಶ್ ಶೆಟ್ಟಿ ನಿರೂಪಿಸಿ, ವಂದಿಸಿದರು.