ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮ: ಕೆ.ರಾಮರಾಜನ್

sp k.ramarajan
Published on

ಮಡಿಕೇರಿ: ಅನಧಿಕೃತ ಹೋಂಸ್ಟೆಗಳ ವಿರುದ್ಧ ಪೊಲೀಸ್ ಇಲಾಖೆ ನಿಗಾವಹಿಸಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಎಚ್ಚರಿಸಿದರು.

ನಗರದ ಮೈತ್ರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಡಿಕೇರಿ ತಾಲೂಕು ಹಾಗೂ ಮಡಿಕೇರಿ ನಗರ ವ್ಯಾಪ್ತಿಯ ಹೋಂಸ್ಟೆ ಮಾಲೀಕರು ಹಾಗೂ ವ್ಯವಸ್ಥಾಪಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲಾಧ್ಯಂತ ಹೋಂಸ್ಟೆಗಳು ಕಾರ್ಯಚರಿಸುತ್ತಿದ್ದು, ಹಲಾವರು ಹೋಂಸ್ಟೆ ಮಾಲೀಕರು ಪ್ರವಾಸೋಧ್ಯಮ ಇಲಾಖೆಯಿಂದ ನೋಂದಾಯಿಸಿಕೊಂಡಿಲ್ಲ. ಇದು ಕಾನೂನಿಗೆ ವಿರುದ್ಧವಾಗಿದ್ದು, ಅನಧಿಕೃತವಾಗಿ ಹೋಂಸ್ಟೆ ನಡೆಸುತ್ತಿರುವವರು ನೋಂದಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಕ್ರಮ ಹೋಂಸ್ಟೆ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಮುಂದಾಗಲಿದೆ ಎಂದು ಎಚ್ಚರಿಸಿದ್ದಾರೆ.

ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಪ್ರವಾಸಿಗರ ಸುರಕ್ಷತೆ ದೃಷ್ಠಿಯಿಂದ ನೋಂದಾಯಿತ ಹೋಂಸ್ಟೆಗಳು ಕಾನೂನು ಬದ್ಧವಾಗಿ ಕಾರ್ಯಚರಿಸಬೇಕು. ಕಾನೂನು ಉಲ್ಲಂಘನೆಯಾದಲ್ಲಿ ಹಾಗೂ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಿದರೆ ಅಂತಹ ಮಾಲೀಕರಿಗೆ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯನ್ನು ಯಾರೂ ಕೂಡ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಬೇಕು. ಅತಿಥಿಗಳಿಂದ ಹೆಚ್ಚಿನ ಹಣ ಪಡೆದು ಮೋಸ ಮಾಡುವುದು, ಅತಿಥಿಗಳಿಗೆ ಹೊಡೆಯುವುದು, ಬಯ್ಯುವುದರ ಬಗ್ಗೆ ದೂರುಗಳು ಬಂದಲ್ಲಿ ಇಲಾಖೆ ಸುಮ್ಮನಿರಲ್ಲ. ಇದಕ್ಕೆ ಯಾರೂ ಕೂಡ ಆಸ್ಪದ ನೀಡಬಾರದು ಎಂದು ಹೇಳಿದರು.

ಹೋಂಸ್ಟೆ ನೋಂದಾಣಿ ಮಾಡಲು ನಿಯಮಗಳನ್ನು ಸಡಿಲಿಸಲಾಗಿದೆ. ಸುಮಾರು ೧೮ ಅಂಶಗಳ ನಿಯಮದಿಂದ ವಿನಾಯಿತಿ ನೀಡಿ ಕೇವಲ ಮೂರು ಅಂಶಗಳನ್ನು ಪ್ರಮುಖವಾಗಿ ಪಾಲಿಸಲು ಆದೇಶ ನೀಡಲಾಗಿದೆ. ಪ್ರತಿ ಹೋಂಸ್ಟೆ ಹಾಗೂ ಹೊಟೇಲ್ ಮಾಲೀಕರು ಸಿಸಿ ಟಿವಿ ಕ್ಯಾಮರಾಗಳನ್ನು ಖಡ್ಡಾಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಸಾಕಷ್ಟು ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಸಲಹೆರ ನೀಡಿದರು.

ಪ್ರವಾಸೋಧ್ಯಮ ಇಲಾಖೆ ಉಪ ನಿರ್ದೇಶಕಿ ಅನೀತಾ ಭಾಸ್ಕರ್ ಮಾತನಾಡಿ, ಹೋಂಸ್ಟೆ ನೋಂದಾಣಿಗೆ ಸರ್ಕಾರ ಸುಲಭ ನಿಯಮಗಳನ್ನು ಜಾರಿಗೊಳಿಸಿದ್ದು, ಕೊಡಗು ಜಿಲ್ಲೆಯಲ್ಲಿ ೩೫೦೦ಕ್ಕು ಹೆಚ್ಚು ಹೋಂಸ್ಟೆಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹಲವಾರು ಹೋಂಸ್ಟೆಗಳು ನೋಂದಣಿ ಮಾಡಿಕೊಂಡಿಲ್ಲ. ನೋಂದಣಿ ಪ್ರಕ್ರಿಯೇ ಸಡಿಲಗೊಂಡಿದ್ದು, ಎಲ್ಲಾರು ನಿಯಮ ಪಾಲಿಸಿ ನೋಂದಾಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಹೋಂಸ್ಟೆ ಮಾಲೀಕರು, ದಲ್ಲಾಳಿಗಳ ಹಾವಳಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಡಿವೈಎಸ್‌ಪಿ ಸೂರಜ್, ಹೋಂಸ್ಟೆ ಅಸೋಶಿಯೇಷನ್ ಪ್ರಮುಖರಾದ ಮೋಂತಿ ಗಣೇಶ್, ಹೊಟೇಲ್ ಮತ್ತು ರೇಸಾರ್ಟ್ ಸಂಸ್ಥೆಯ ನಾಸೀರ್, ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು ಈ ಸಂದರ್ಭ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net