ಗುತ್ತಿಗೆದಾರ ಕೆಲಸ ಮಾಡದಿದ್ದರೆ ಅಧಿಕಾರಿ ಮೇಲೆ ಕ್ರಮ

Action against the officer if the contractor does not work
ರಬಕವಿ ಬನಹಟ್ಟಿ ನಗರಸಭೆ ಸಭಾ ಭವನದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಸಿದ್ದು ಸವದಿ, ತಹಸೀಲ್ದಾರ್ ಗಿರೀಶ ಸ್ವಾದಿ, ವಿಜಯಕುಮಾರ ಕಡಕೋಳ, ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ ಇದ್ದರು.
Published on

ರಬಕವಿ-ಬನಹಟ್ಟಿ: ತಾಲೂಕಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವುದು ಅಧಿಕಾರಿಗಳ ಮೂಲ ಹೊಣೆಗಾರಿಕೆಯಾಗಿದ್ದು, ಯಾವುದೇ ಕಾರಣ ನೀಡದೆ ಜನಪರ ಸೇವೆ ನೀಡಲು ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.

ನಗರಸಭೆ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ವಿವರಣೆ ಪಡೆಯುವ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಐದು ಕಾಮಗಾರಿಗಳನ್ನು ಪೂರ್ಣಗೊಳಿಸದೆ ಕಾಲಹರಣ ಮಾಡುತ್ತಿರುವ ಗುತ್ತಿಗೆದಾರನ ಮೇಲೆ ಕಾನೂನು ಬದ್ಧ ಕ್ರಮ ಜರುಗಿಸಿ ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ನೋಡಿಕೊಳ್ಳದ ಕಾರ್ಯನಿರ್ವಾಹಕ ಇಂಜಿನಿಯರ್ ಬಂಡಿವಡ್ಡರ ಮೇಲೆ ಆಕ್ರೋಶ ಹೊರಹಾಕಿದರು. ಅಲ್ಲದೆ, ಗುತ್ತಿಗೆದಾರನಿಂದ ಕಾರ್ಯ ನಿರ್ವಹಣೆ ಮಾಡಿಸಲು ವಿಲರಾದ ನಿಮ್ಮ ಬಗ್ಗೆ ಸಚಿವರಿಗೆ ವರದಿ ನೀಡಿ ಕ್ರಮಕ್ಕೆ ಆಗ್ರಹಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿದ ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಬಂಡಿವಡ್ಡರ, ಕಾಮಗಾರಿಗಳ ಸಂಪೂರ್ಣ ವಿವರಣೆ ನೀಡಿದರು.

ತಾಲೂಕಿನ ಪಶು ವೈದ್ಯಾಧಿಕಾರಿ ಡಾ. ಬಸವರಾಜ ಗೌಡರ ಮಾತನಾಡಿ, ತಾಲೂಕಿನಲ್ಲಿ ಒಟ್ಟು 52,267 ಜಾನುವಾರುಗಳಿದ್ದು, ತೇರದಾಳದಲ್ಲಿ 25,640 ಜಾನುವಾರುಗಳಿವೆ. ಎಲ್ಲ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ, 49,155 ಲಸಿಕಾಕರಣ ಮತ್ತು 27,431 ಜಾನುವಾರುಗಳಿಗೆ ಚರ್ಮಗಂಟು ಲಸಿಕೆ ನೀಡಲಾಗಿದೆ ಎಂದು ವಿವರಣೆ ನೀಡಿದರು.

ರಬಕವಿ-ಬನಹಟ್ಟಿ ತಾಲೂಕು ಆಸ್ಪತ್ರೆಗೆ 9ಎಕರೆ 4 ಗುಂಟೆ ಜಾಗ ನಿಗದಿಪಡಿಸಿದ್ದು, ಪ್ರಸ್ತಾವನೆಯನ್ನು ತಹಸೀಲ್ದಾರ್, ಎಸಿ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ಜಿಪಂ ಇಂಜನಿಯರಿಂಗ್ ವಿಭಾಗದಿಂದ 4.84 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ದುರಸ್ತಿ, 21 ಲಕ್ಷ ರೂ. ವೆಚ್ಚದಲ್ಲಿ 5 ರಸ್ತೆ ಕಾಮಗಾರಿಗಳು, ಸಸಾಲಟ್ಟಿ ಕೆರೆ ಸುಧಾರಣೆಗೆ ಕಾಮಗಾರಿ ಅನುಮೋದನೆ ಬಾಕಿ ಇದೆ ಎಂದು ಇಂಜಿನಿಯರ್ ಬಿ.ಎಸ್. ತಳವಾರ ವಿವರಿಸಿದರು.

ಬಿಇಒ ಅಶೋಕ ಬಸನ್ನವರ ಮಾತನಾಡಿ, ತಾಲೂಕಿನಲ್ಲಿ 128 ಸರ್ಕಾರಿ, 30 ಅನುದಾನಿತ ಮತ್ತು 236 ಖಾಸಗಿ ಶಾಲೆಗಳಲ್ಲಿ ಕ್ರಮವಾಗಿ 8896, 30606, 24109 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಕುಡಿಯುವ ನೀರು, ಸಾರಿಗೆ, ಶಿಶು ಅಭಿವೃದ್ಧಿ, ತೋಟಗಾರಿಕೆ ಸೇರಿದಂತೆ ಎಲ್ಲ 43 ಇಲಾಖೆಗಳ ಅಧಿಕಾರಿಗಳು ಕೆಡಿಪಿ ಸಭೆಯಲ್ಲಿ ವಿವರಣೆ ನೀಡಿದರು.

ರಬಕವಿ ಹೊಸ ಬಸ್ ನಿಲ್ದಾಣದ ಬಳಿ ನಿಗದಿಯಾಗಿದ್ದ ಸ್ಥಳದಲ್ಲಿ ತಾಲೂಕು ಆಡಳಿತದ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ ಭೂ ಮಾಲೀಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರಿಂದ ವಿಳಂಬವಾಗಿತ್ತು. ಸದ್ಯ ವಿವಾದಿತ ಜಾಗ ಪ್ರಕರಣದಿಂದ ಖುಲಾಸೆಯಾಗಿರುವ ಕಾರಣ ತಾಲೂಕು ಕಚೇರಿ ನಿರ್ಮಾಣಕ್ಕೆ ಯಾವುದೇ ತಡೆಯಿಲ್ಲವಾದರೂ ಬನಹಟ್ಟಿಯ ಜನತೆ ಕೈಗಾರಿಕಾ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಿಸಲು ಆಗ್ರಹಿಸುತ್ತಿದ್ದಾರೆ. ರಬಕವಿ-ಬನಹಟ್ಟಿ ನಗರಗಳ ಹಿರಿಯರು ಒಮ್ಮತದಿಂದ ಸ್ಥಳ ಗುರುತಿಸಿದರೆ ಲಭ್ಯ ಅನುದಾನದ ಮೊತ್ತ ಬಳಸಿ ಪ್ರಜಾಸೌಧ ನಿರ್ಮಾಣ ಸಾಧ್ಯವಾಗಲಿದೆ ಎಂದು ಶಾಸಕ ಸವದಿ ಸ್ಪಷ್ಟನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net