

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಬರುವ ಸರ್ಕಾರಿ ಶಾಲಾ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಸಿದರು.
ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸುವ ಸಂಬಂಧ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರಿಗೆ ನಗರದ ಮುಕ್ತಗಂಗೋತ್ರಿ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ಶಿಕ್ಷಕರಿಗೆ ನೀತಿ ಪಾಠ, ಕಿವಿಮಾತು, ಎಚ್ಚರಿಕೆ, ಕರ್ತವ್ಯಪ್ರಜ್ಞೆ ಅರಿವು…ಹೀಗೆ ಡಿಸಿ ಪಾಠ ಮಾಡಿದರು.
ಇದು ಮಕ್ಕಳಿಗೆ ಅಷ್ಟೇ ಅಲ್ಲ, ಶಿಕ್ಷಕರಿಗೂ ಪರೀಕ್ಷೆಯೇ. ಆದ್ದರಿಂದ ಉತ್ತಮ ಫಲಿತಾಂಶ ಬರುವ ಶಾಲಾ ಶಿಕ್ಷಕರನ್ನು ಅಭಿನಂದಿಸಲಾಗುವುದು. ಅದೇ ರೀತಿ ಕಡಿಮೆ ಫಲಿತಾಂಶ ಬರುವ ಶಾಲಾ ಶಿಕ್ಷಕರ ವಿರುದ್ಧ ಕ್ರಮ ವಹಿಸಲಾಗುವುದು. ಖಾಸಗಿ ಶಾಲಾ ಶಿಕ್ಷಕರನ್ನು ಆಯಾ ಆಡಳಿತ ಮಂಡಳಿ ನೋಡಿಕೊಳ್ಳುತ್ತದೆ. ಸರ್ಕಾರಿ ಶಿಕ್ಷಕರಿಗೆ ಏನು ಆಗಲ್ಲ ಎಂಬ ಭ್ರಮೆ ಇದೆ. ಈ ಬಾರಿ ಅದನ್ನು ಹುಸಿಗೊಳಿಸಿ ದಂಡನೆಗೆ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ ಎಂದು ಎಚ್ಚರಿಸಿದರು.
ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆ 16ನೇ ಸ್ಥಾನ ಪಡೆದಿತ್ತು. ಈ ಸಲ ಅಗ್ರ 3 ಸ್ಥಾನದೊಳಗೆ ಜಿಲ್ಲೆ ಬರಬೇಕು. ಆದ್ದರಿಂದ ಫಲಿತಾಂಶವನ್ನು ಉತ್ತಮಪಡಿಸಲು ಜಿಲ್ಲೆಯ ಎಲ್ಲ ಶಿಕ್ಷಕರು ಪಣ ತೊಡಬೇಕು. ಅದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಮೈಸೂರು ಮುಖ್ಯಮಂತ್ರಿ ತವರು ಜಿಲ್ಲೆಯಾಗಿರುವುದು ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಮುಖ್ಯಮಂತ್ರಿ ಅವರು ಕೆಡಿಪಿ ಸಭೆಯಲ್ಲೂ ಫಲಿತಾಂಶ ಉನ್ನತೀಕರಣಗೊಳಿಸಲು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಅನೈತಿಕ ಮಾರ್ಗ ಬಿಟ್ಟು, ನೈತಿಕ ಮಾರ್ಗದಲ್ಲೇ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಶಾಲಾ ಅವಧಿಯಲ್ಲಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕ ಒಬ್ಬ ನೌಕರನಷ್ಟೆ. ಆದರೆ, ಶಾಲೆ ಮುನ್ನ, ನಂತರವೂ ಪಾಠ ಮಾಡುವ ಶಿಕ್ಷಕ ಮಕ್ಕಳ ಪಾಲಿನ ದೇವರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ, ಉತ್ತಮ ಭವಿಷ್ಯ ರೂಪಿಸುವ ಗುರು ಮಾತ್ರ ಸದಾ ನೆನಪಿನ ಉಳಿಯುತ್ತಾರೆ. ಇದನ್ನು ಅರಿತು ಶಿಕ್ಷಕರು ಕೆಲಸ ಮಾಡಬೇಕು ಎಂದರು.
ಪರೀಕ್ಷೆಗೆ ಇನ್ನೂ 60 ದಿನ ಬಾಕಿ ಇದೆ. ತಮ್ಮ ವಿದ್ಯಾರ್ಥಿಯ ಭವಿಷ್ಯ ಬದಲಿಸಲು ಉತ್ತಮ ಅವಕಾಶ ಇದು. ಮೊದಲು ಮಕ್ಕಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸಬೇಕು. ಮನೆ ಮನೆಗೆ ಭೇಟಿ ನೀಡಿ ಓದಿಗೆ ಪೂರಕ ವಾತಾವರಣ ಕಲ್ಪಿಸುವಂತೆ ಪಾಲಕರಿಗೆ ತಿಳಿವಳಿಕೆ ಮೂಡಿಸಬೇಕು. ಮನೆಯಲ್ಲಿ ಓದುವ ವಾತಾವರಣ ಇಲ್ಲದಿದ್ದರೆ ಸರ್ಕಾರಿ ಕಟ್ಟಡ, ಭವನಗಳಲ್ಲಿ ಓದುವ ಕೊಠಡಿ ತೆರೆಯಬೇಕು. ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಲೆ ಬಿಟ್ಟಿರುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆ ತರಬೇಕು. ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಗುರುತಿಸಬೇಕು. ವಲಸೆ ಹೋಗುವ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಬೇಕು. ಪರೀಕ್ಷೆ ಬರೆಯುವ ಮಕ್ಕಳಿಗೆ ಹೆಚ್ಚಿನ ಕಾಳಜಿ ತೋರಬೇಕು ಎಂದರು.
ಕಲಿಕೆಯಲ್ಲಿ ಮಧ್ಯಮ ಮತ್ತು ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಹೆಚ್ಚು ಆದ್ಯತೆ ಕೊಡಬೇಕು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಅಭ್ಯಾಸ ಮಾಡಿಸಬೇಕು. ತೀರಾ ಹಿಂದುಳಿದ ಮಕ್ಕಳಿಗೆ ತೆರೆದ ಪುಸ್ತಕ ಪರೀಕ್ಷೆ ನಡೆಸಬೇಕು ಬಳಿಕ ಸಾಮಾನ್ಯ ಪರೀಕ್ಷೆ ನಡೆಸಬೇಕು ಎಂದು ಸಲಹೆ ನೀಡಿದರು.
ಸರ್ಕಾರ ವಾರ್ಷಿಕ ಆಯವ್ಯಯ ಹಾಗೂ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವಂತೆ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಯೋಜನೆ ರೂಪಿಸಿಕೊಂಡು ಕಾರ್ಯೋನ್ಮುಖರಾಗಬೇಕು. 8, 9ನೇ ತರಗತಿಯ ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಣೆಗೂ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಬಿಇಒ, ಸಿಆರ್‌ಪಿಗಳ ಪರೀಕ್ಷೆಗೆ ಪೂರಕವಾಗಿ ಶಿಕ್ಷಕರ ಕಾರ್ಯವೈಖರಿಯನ್ನು ಪರಿಶೀಲಿಸುವ ಮೂಲಕ ಫಲಿತಾಂಶ ವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಭವಿಷ್ಯ ಹೇಳುವವರು ಜ್ಯೋತಿಷಿಗಳಲ್ಲ, ಶಿಕ್ಷಕರು. ಪ್ರತಿ ವಿದ್ಯಾರ್ಥಿಯ ಚಾಕಚಕ್ಯತೆ ಶಿಕ್ಷಕರಿಗೆ ತಿಳಿದಿರುತ್ತದೆ. ಹಾವಭಾವ, ದುರ್ಬಲತೆ, ಸಮಾಜಘಾತುಕ ವ್ಯಕ್ತಿಯಾಗುವನೋ ಎಂಬುದು ತಿಳಿದಿರುತ್ತದೆ. ಸಾಧಕನನ್ನು ಗುರುತಿಸಬಲ್ಲ ಶಕ್ತಿಯುಳ್ಳವರು ಶಿಕ್ಷಕರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಶಿಕ್ಷಕರಿಂದ ನಡೆದಿರುವ 4 ಫೋಕ್ಸೋ ಪ್ರಕರಣಗಳು ವರದಿಯಾಗಿವೆ. ಇದು ಬಹಳ ಗಂಭೀರವಾದ ವಿಷಯ. ಇದರಿಂದ ಶಾಲೆ, ಸಮಾಜ, ಶಿಕ್ಷಕರು ಸಹ ಮುಜುಗರ ಎದುರಿಸಬೇಕಾಗುತ್ತದೆ. ಆದ್ದರಿಂದ ಶಿಕ್ಷಕರು ಎಚ್ಚರಿಕೆ ವಹಿಸಬೇಕು. ಈ ಕುರಿತು ಅರಿವು ಮೂಡಿಸಲು ಕಾರ್ಯಾಗಾರವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶಾಲೆಯಲ್ಲಿ ಮಕ್ಕಳ ಎದುರು ಕೆಲ ಶಿಕ್ಷಕರು ಗುಟ್ಕಾ, ಧೂಮಪಾನ ಇನ್ನಿತರ ದುರಭ್ಯಾಸ ನಡೆಸುವ ಮೂಲಕ ಮಕ್ಕಳಿಗೆ ಕೆಟ್ಟ ಉದಾಹರಣೆಯಾಗಿದ್ದಾರೆ. ಇದು ಸರಿಯಲ್ಲ. ಗುರು ಕುರಿತು ವಿಶ್ವಾಸ, ಗೌರವ ಬರುವಂತೆ ಶಿಕ್ಷಕರು ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಕೆ. ಪಾಂಡು, ಬಿಇಒ, ಸಿಆರ್‌ಪಿಗಳು, ಶಿಕ್ಷಕರು ಭಾಗವಹಿಸಿದ್ದರು.