

ನಾಗಮಂಗಲ: ಕಂದಾಯ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ಇದ್ದು, ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಸಾರ್ವಜನಿಕರನ್ನು ಸುಮ್ಮನೆ ಅಲೆದಾಡಿಸುವುದು ಗೊತ್ತಾದರೆ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನೂತನ ತಹಸೀಲ್ದಾರ್ ಕುಂಞ ಅಹಮದ್ ಎಚ್ಚರಿಕೆ ನೀಡಿದರು.
ಯಾರ ಒತ್ತಡಗಳಿಗೂ ಮಣಿಯದೆ ಕೇಂದ್ರ ಸ್ಥಾನದಲ್ಲಿರದ ನೌಕರನ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ತಮ್ಮ ಕೆಲಸಗಳಿಗೆ ಸರ್ಕಾರದಿಂದ ನಿಗದಿಪಡಿಸಲಾಗಿರುವ ಮೊತ್ತವನ್ನು ಮಾತ್ರ ಪಾವತಿಸಬೇಕಿದ್ದು, ಲಂಚಕ್ಕಾಗಿ ಯಾರಾದರೂ ಬೇಡಿಕೆಯಿಟ್ಟರೆ ನೇರವಾಗಿ ನನಗೆ ದೂರು ನೀಡಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜನಪರ ಆಡಳಿತ ನೀಡಲು ಯೋಜನೆ ರೂಪಿಸಿದ್ದು, ಶೀಘ್ರವೇ ಪೌತಿಖಾತೆ ಆಂದೋಲನ, ಪಿಂಚಣಿ ಅದಾಲತ್ ಮತ್ತು ಆರ್‌ಟಿಸಿ ಸಮಸ್ಯೆ ಇತ್ಯರ್ಥ ಮುಂತಾದ ಕಾರ್ಯಕ್ರಮಗಳನ್ನು ಹೋಬಳಿವಾರು ನಡೆಸಲಾಗುವುದು. ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದ್ದು, ಇದಕ್ಕೆ ತಾಲೂಕಿನ ಜನತೆ ಸ್ಪಂದಿಸಬೇಕಿದೆ. ಪ್ರತಿ ಗ್ರಾಮಗಳಿಗೂ ಸ್ಮಶಾನ ವ್ಯವಸ್ಥೆ ಕಲ್ಪಿಸುವ ಗುರಿ ಇದೆ ಎಂದರು.
ಅಶುಚಿತ್ವಕ್ಕೆ ಶೀಘ್ರವೇ ಇತಿಶ್ರೀ:
ತಾಲೂಕು ಕಚೇರಿ ಆವರಣದೊಳಗೆ ಮತ್ತು ಕಚೇರಿಯ ಮುಂಭಾಗ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುವ ವಾಹನಗಳಿಂದ ಕಚೇರಿಗೆ ಬರುವ ಅಧಿಕಾರಿಗಳ ವಾಹನಗಳು ಮತ್ತು ಸಾರ್ವಜನಿಕರಿಗೆ ಜತೆಗೆ ಅಂಗವಿಕಲರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಈ ಸಮಸ್ಯೆ ಕುರಿತಾಗಿ ಕೂಡಲೇ ಆರ್‌ಟಿಒ, ಪೊಲೀಸ್ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳ ಜತೆ ಸಭೆ ನಡೆಸಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಸ್ಯೆ ಬಗೆಹರಿಸಲಾಗುವುದು. ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು ಪ್ರತಿ ತಿಂಗಳು ಒಂದು ದಿನ ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿ ಸೇರಿ ಕಚೇರಿ ಆವರಣವನ್ನು ಸ್ವಚ್ಛಗೊಳಿಸಲಾಗುವುದು. ಆವರಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಿಗೂ ಭೇಟಿ ನೀಡಿ ಬಿಸಿಯೂಟ ವ್ಯವಸ್ಥೆ, ಹಾಸ್ಟೆಲ್‌ಗಳು, ವಿದ್ಯುತ್ ಸಮಸ್ಯೆ, ವೈದ್ಯಕೀಯ ವ್ಯವಸ್ಥೆ ಹಾಗೂ ಪಡಿತರ ವಿತರಣೆ ಸೇರಿದಂತೆ ಮುಂತಾದವುಗಳನ್ನು ಪರಿಶೀಲನೆ ನಡೆಸುವ ಮೂಲಕ ತಾಲೂಕು ಆಡಳಿತವನ್ನು ಚುರುಕುಗೊಳಿಸಲಾಗುವುದು ಎಂದರು. ಶಿರಸ್ತೇದಾರ್ ಪ್ರಕಾಶ್, ಉಮೇಶ್ ಇದ್ದರು.