ಗೋಮಾಳ ಒತ್ತುವರಿದಾರರ ವಿರುದ್ಧ ಕ್ರಮ

FotoJet (1)
ಬಂಗಾರಪೇಟೆ ತಾಲೂಕಿನ ವರದಾಪುರ ಗೋಮಾಳ ಜಮೀನಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
Published on

ಬಂಗಾರಪೇಟೆ: ಸರ್ಕಾರಿ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದ ಎಂಟು ಜನರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ತಹಸೀಲ್ದಾರ್​ ಸುಜಾತಾ ತಿಳಿಸಿದರು.

ತಾಲೂಕಿನ ವರದಾಪುರ ಗ್ರಾಮದ ಸರ್ವೇ ನಂ.9ರ ಗೋಮಾಳ ಜಮೀನಿನಲ್ಲಿ ಬೆಳೆದಿದ್ದ ಗಿಡ&ಮರಗಳನ್ನು ಕಡಿದು ಕೋಟ್ಯಾಂತರ ರೂ. ಬೆಳೆ ಬಾಳುವ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಸುತ್ತಮುತ್ತಲಿನ ಗ್ರಾಮಸ್ಥರು ಮುಂದಾಗಿದ್ದರು. ಈ ಬಗ್ಗೆ ವಿಜಯವಾಣಿಯಲ್ಲಿ ಜ.10 ರಂದು "ಕೋಟ್ಯಾಂತರ ಮೌಲ್ಯದ ಭೂ ಸ್ವಾಹ?' ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.

ವರದಿಯಿಂದ ಎಚ್ಚೆತ್ತುಕೊಂಡ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತುವರಿಯಾಗಿರುವ ಭೂ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾನೂನು ಬಹಿರವಾಗಿ ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದವರ ಮಾಹಿತಿ ಪಡೆದು ಮೇಲಾಧಿಕಾರಿಗಳಿಗೆ ಸೂಕ್ತ ಕ್ರಮ ಜರುಗಿಸಲು ವರದಿ ನೀಡಿದ್ದಾರೆ.

ಈ ಬಗ್ಗೆ ತಹಸೀಲ್ದಾರ್​ ಸುಜಾತಾ ಮಾತನಾಡಿ, ವರದಾಪುರ ಗ್ರಾಮದ ಸರ್ವೇ ನಂ. 9ರಲ್ಲಿ 142 ಎಕರೆ 27 ಗುಂಟೆ ಗೋಮಾಳ ಜಮೀನು ಇದ್ದು, ಪಹಣಿಯಲ್ಲಿ ಯಾರಿಗೂ ಭೂಮಿ ಮಂಜೂರು ಮಾಡಿರುವುದು ಕಂಡು ಬಂದಿಲ್ಲ. 2019 ಮತ್ತು 2021ರಲ್ಲಿ ನಮೂನೆ 57ಕ್ಕೆ ಹಲವು ಗ್ರಾಮಗಳ ಗ್ರಾಮಸ್ಥರು ಒಟ್ಟು 119 ಅರ್ಜಿ ಸಲ್ಲಿಸಿರುತ್ತಾರೆ. ಇದೇ ಸರ್ವೇ ನಂಬರ್​ನಲ್ಲಿ ಮಿಲಿಟರಿ ದರಖಾಸ್ತು ಮಂಜೂರಾತಿಗಾಗಿ ಮಾಜಿ ಯೋಧ ಮುಷ್ಟ್ರಹಳ್ಳಿಯ ಆರ್​.ಸುರೇಶ್​ ಮತ್ತು ತನಿಮಡಗು ಗ್ರಾಮದ ಆರ್​.ಮಹದೇವ್​ 57ರಡಿ ಅರ್ಜಿ ಸಲ್ಲಿಸಿ ಸ್ವಾಧಿನದಲ್ಲಿದ್ದಾರೆ. ಜತೆಗೆ ಪಕ್ಕದ ಒಂದು ಎಕರೆ ಜಮೀನು ಸಮತಟ್ಟು ಮಾಡಿಕೊಂಡು ಒತ್ತುವರಿಗೆ ಮುಂದಾಗಿದ್ದಾರೆ.

ಆದರೆ 119 ಅರ್ಜಿಗಳ ಪೈಕಿ 118 ಜನ ಸ್ವಾಧಿನದಲ್ಲಿ ಇಲ್ಲದ ಕಾರಣ ಸರ್ಕಾರದ ಆದೇಶದಂತೆ 2023ರ ಡಿಸೆಂಬರ್​ 1ರಂದು ಎಲ್ಲ ಅರ್ಜಿಗಳನ್ನು ವಜಾ ಮಾಡಲಾಗಿರುತ್ತದೆ. ಆದರೆ ಇತ್ತೀಚೆಗೆ ಬತ್ತಲೂರು, ರಾಮಸಂದ್ರ, ತನಿಮಡಗು, ಆರಿಮಾನಹಳ್ಳಿಯ ಕೆಲವು ಜನರು ರಾತ್ರೋರಾತ್ರಿ ಜೆಸಿಬಿ ಬಳಸಿ ಕಲ್ಲು ಬಂಡೆಗಳು ಮತ್ತು ಮರಗಳನ್ನು ತೆರವುಗೊಳಿಸಿ ಭೂಮಿ ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದರು. ಈ ಪೈಕಿ ಮುರುಗನ್​ ರಾಜು, ವೆಂಕಟೇಶಪ್ಪ, ಟಿ.ನಾರಾಯಣಪ್ಪ, ವೆಂಕಟೇಶ್​ ರಾಜು, ಗೋವಿಂದರಾಜುಲು, ಕದಿರಿವೇಲು, ರಾಮಚಂದ್ರರಾಜು ಮತ್ತು ಆರ್​.ಮಹದೇವ್​ ಎಂಬುವವರು ಕಳೆದೊಂದು ವಾರದಿಂದ ರಾತ್ರೋರಾತ್ರಿ ಗೋಮಾಳ ಭೂಮಿ ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದರು ಎಂಬ ಮಾಹಿತಿಯನ್ನು ಸ್ಥಳ ಪರಿಶೀಲನೆ ವೇಳೆ ಅಲ್ಲಿನ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಎಂಟೂ ಜನಕ್ಕೆ ನೋಟಿಸ್​ ನೀಡಿ ಮುಂದೆ ಎಂದೂ ಸರ್ಕಾರಿ ಭೂಮಿಯನ್ನು ಒತ್ತುವರಿಗೆ ಮುಂದಾಗದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಮತ್ತೆ ಏನಾದರೂ ಒತ್ತುವರಿಗೆ ಮುಂದಾದರೆ ಕಾನೂನು ಕೇಸ್​ ದಾಖಲಿಸಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net