ದೂರುಗಳು ಕೇಳಿಬಂದರೆ ಅಧಿಕಾರಿಗಳ ವಿರುದ್ಧ ಕ್ರಮ

21 mlv 3
ಮಳವಳ್ಳಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು-ಕೊರತೆ ಸಭೆಯಲ್ಲಿ ಲೋಕಾಯುಕ್ತ ಎಸ್‌ಪಿ ಸುರೇಶ್‌ಬಾಬು, ಡಿವೈಎಸ್‌ಪಿ ಎಚ್.ಟಿ.ಸುನಿಲ್‌ಕುಮಾರ್ ಸಾರ್ವಜನಿಕರ ಅಹವಾಲು ಆಲಿಸಿದರು. ತಹಸೀಲ್ದಾರ್ ಲೋಕೇಶ್, ಗ್ರೇಡ್-2 ತಹಸೀಲ್ದಾರ್ ಬಿ.ವಿ.ಕುಮಾರ್, ತಾಪಂ ಇಒ ಶ್ರೀನಿವಾಸ್ ಇದ್ದರು.
Published on

ಮಳವಳ್ಳಿ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಸಾರ್ವಜನಿಕರ ದೂರು ಮತ್ತು ಸಮಸ್ಯೆಗಳ ಅಹವಾಲುಗಳ ಸ್ವೀಕಾರ ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅಧಿಕಾರಿಗಳ ಮುಂದೆ ಸಮಸ್ಯೆಗಳ ಸುರಿಮಳೆಗೈದರು.

ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳು ವಿಳಂಬವಾಗುತ್ತಿರುವ ಬಗ್ಗೆ ಹಾಗೂ ಅಧಿಕಾರಿಗಳ ವಿರುದ್ಧ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಸಾರ್ವಜನಿಕರು ಲೋಕಾಯುಕ್ತ ಎಸ್‌ಪಿ ಸುರೇಶ್‌ಬಾಬು, ಡಿವೈಎಸ್‌ಪಿ ಎಚ್.ಟಿ.ಸುನಿಲ್‌ಕುಮಾರ್ ಅವರ ಎದುರು ತಮ್ಮ ಅಳಲು ತೋಡಿಕೊಂಡರು.
ಕಂದಾಯ ಇಲಾಖೆಯಲ್ಲಿ ಬಹಳಷ್ಟು ಅಕ್ರಮಗಳು ನಡೆಯುತ್ತಿದ್ದು, ಚಿಲ್ಲಾಪುರ ಗ್ರಾಮದ ಸರ್ವೇ ನಂ 4/2 ಮತ್ತು 4/6 ರ ನಮ್ಮ ಜಮೀನಿನ ಮೂಲ ದಾಖಲಾತಿಗಳಿಗಾಗಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅಧಿಕಾರಿಗಳ ಮೂಲ ದಾಖಲೆ ಇಲ್ಲವೆಂದು ಹಿಂಬರಹ ಕೊಟ್ಟಿದ್ದು, ಇದರ ಬಗ್ಗೆ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಎವಿಟಿ ಕುಮಾರ್ ಅರ್ಜಿ ನೀಡಿದರು.

ಟಿ.ಕೆ.ಹಳ್ಳಿ ಗ್ರಾಪಂನಲ್ಲಿ ಹಲವು ವರ್ಷಗಳಿಂದ ಇ-ಸ್ವತ್ತು ಮಾಡಿಕೊಡದೆ ಅಲೆಸುತ್ತಿದ್ದಾರೆಂದು ವೃದ್ಧ ಶಿವಮಾದೇಗೌಡ ಅಳಲು ತೋಡಿಕೊಂಡರು. ಕೂಡಲೇ ಸೂಕ್ತ ದಾಖಲೆ ಮಾಡಿಕೊಡದಿದ್ದರೆ ಲೋಕಾಯುಕ್ತ ಕಾನೂನಿನ ರುಚಿ ತೋರಿಸಬೇಕಾಗುತ್ತದೆ ಎಂದು ಎಸ್‌ಪಿ ಸುರೇಶ್ ಬಾಬು ಅವರು ಸ್ಥಳದಲ್ಲಿದ್ದ ಪಿಡಿಒ ಅಧಿಕಾರಿ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಂದೆಗಾಲದಲ್ಲಿರುವ 3.5 ಎಕರೆ ಸ್ಮಶಾನದ ಶೇ.90 ರಷ್ಟು ಜಾಗ ಒತ್ತುವರಿಯಾಗಿದ್ದು, ತೆರವುಗೊಳಿಸಿಕೊಡುವಂತೆ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವಹಿಸಲ್ಲವೆಂದು ಗ್ರಾಮಸ್ಥರು ಮನವಿ ಸಲ್ಲಿಸಿದರು. ಕೂಡಲೇ ತೆರವಿಗೆ ಕ್ರಮ ತೆಗೆದುಕೊಳ್ಳಬೇಕೆಂದು ತಹಸೀಲ್ದಾರ್‌ಗೆ ಸೂಚಿಸಿದರು.

ನೂರಾರು ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಕೆಲವು ಸಮಸ್ಯೆಗಳಿರುವ ಅರ್ಜಿಗಳಿಗೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿ ಸ್ಥಳದಲ್ಲೇ ಪರಿಹಾರ ಮಾಡಿಕೊಡಲಾಯಿತು. 46 ವಿವಿಧ ಇಲಾಖೆಗಳಲ್ಲಿ ತಮ್ಮ ಕೆಲಸಗಳು ವಿಳಂಬವಾಗುತ್ತಿರವ ಬಗ್ಗೆ ಅರ್ಜಿಗಳನ್ನು ಸ್ವೀಕರಿಸಿ ದಾಖಲಿಸಿಕೊಳ್ಳಲಾಯಿತು.

ಎಸ್ಬಿ ಸುರೇಶ್‌ಬಾಬು ಮಾತನಾಡಿ, ಯಾವುದೇ ಸರ್ಕಾರಿ ಕಚೇರಿಯಲ್ಲಿ ನಿಯಮಾನುಸಾರ ಆಗಬೇಕಿರುವ ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಬೇಕು. ಇಲ್ಲಸಲ್ಲದ ಸಬೂಬು ಹೇಳಿ ಜನರನ್ನು ಅಲೆಯುವಂತೆ ಮಾಡುವಂತ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ದೂರುಗಳು ನಮ್ಮ ಬಳಿ ಬಂದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಲೋಕೇಶ್, ಗ್ರೇಡ್-2 ತಹಸೀಲ್ದಾರ್ ಬಿ.ವಿ.ಕುಮಾರ್, ಇಒ ಶ್ರೀನಿವಾಸ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net