ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮ

31arsph1ep
ಅರಸೀಕೆರೆ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಧರ್ಮಶೇಖರ್ ಮಾತನಾಡಿದರು. ಸತೀಶ್, ಜವನಪ್ಪ, ಸಿದ್ದೇಶ್, ಕುಮಾರ್, ಕಮಲಮ್ಮ, ಪರಮೇಶ್, ಸಿರಾಜ್,ರಮೇಶ್, ಪ್ರದೀಪ್, ಕೃಷ್ಣೇಗೌಡ, ಪುರುಷೋತ್ತಮ್ ಇದ್ದಾರೆ.
Published on

ಅರಸೀಕೆರೆ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನ ಸಂಬಂಧ ನಡೆಯುವ ಸಭೆಗಳಿಗೆ ಗೈರಾಗುವ ಅಧಿಕಾರಿಗಳಿಗೆ ನೋಟಿಸ್ ನೀಡುವ ಜತೆಗೆ ಶಿಸ್ತು ಕ್ರಮ ಜರುಗಿಸಲು ಶಿಫಾರಸು ಮಾಡಲು ಹಿಂದೇಟು ಹಾಕುವುದಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವ ನಿಧಿ ಹಾಗೂ ಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳೇ ಬರುತ್ತಿಲ್ಲ. ಕಾಟಾಚಾರಕ್ಕೆಂಬಂತೆ ಇತರ ಸಿಬ್ಬಂದಿ ಕಳುಹಿಸಿ ಕೈ ತೊಳೆದುಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ. ಇನ್ನು ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳು ಜಾರಿಗೆ ಬಾರದಿರುವುದು ಬೇಸರ ತಂದಿದೆ. ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಸದಸ್ಯ ಜಾಜೂರು ಸಿದ್ದೇಶ್ ಆಗ್ರಹಿಸಿದರು.

ಎಂ.ಶಿವರ ಗ್ರಾಮಕ್ಕೆ ಒದಗಿಸಲಾಗಿದ್ದ ಬಸ್ ಸಂಚಾರ ಸೇವೆಯನ್ನು ರದ್ದುಗೊಳಿಸಲಾಗಿದೆ. ಅರಸೀಕೆರೆ-ಹಾರನಹಳ್ಳಿ ಮಾರ್ಗವಾಗಿ ಜಾವಗಲ್‌ಗೆ ಪ್ರತಿನಿತ್ಯ ಸಂಚರಿಸವ ಬಸ್‌ಗಳು ಹಾರನಹಳ್ಳಿ ಹೊರ ವಲಯದಿಂದಲೇ ಹೋಗುತ್ತಿದ್ದು ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಹೀಗಿದ್ದರೂ ಡಿಪೋ ವ್ಯವಸ್ಥಾಪಕರು ಸಭೆಗೆ ಬಂದಿಲ್ಲ. ಇನ್ನು ಯುವನಿಧಿ ಸಂಬಂಧ ಬೇರೆ ಯಾರೋ ಬಂದಿದ್ದು ನಿರ್ಲಕ್ಷೃ ಸಹಿಸುವ ಪ್ರಶ್ನೆಯೇ ಇಲ್ಲ. ಉಭಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವ ಜತೆಗೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಕುರಿತು ನಿರ್ಣಯ ಕೈಗೊಳ್ಳಿ ಎಂದು ಅಧ್ಯಕ್ಷ ಧರ್ಮಶೇಖರ್ ತಾಪಂ ಇಒ ಸತೀಶ್ ಅವರಿಗೆ ಸೂಚಿಸಿದರು.

ತಾಲೂಕಿನ ಗಂಡಸಿ ಹೋಬಳಿ ಚನ್ನಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ಶಿವರಾಜು ಮಾತನಾಡಿ, ದೈನಂದಿನ ಕೆಲಸ ಬದಿಗೊತ್ತಿ ಅನ್ನಭಾಗ್ಯ ಯೋಜನೆಯಡಿ ದೊರೆಯುತ್ತಿರುವ ಪಡಿತರವನ್ನು ಪ್ರಾಮಾಣಿಕವಾಗಿ ವಿತರಿಸುತ್ತಿದ್ದೇವೆ. ಆದರೆ ಸರ್ಕಾರದಿಂದ ನಮಗೆ ನೀಡಬೇಕಾದ ಕಮೀಷನ್ ಮೊತ್ತವನ್ನು ಸಕಾಲಕ್ಕೆ ನೀಡುತ್ತಿಲ್ಲ. ಸದ್ಯ ದೊರೆಯುತ್ತಿರುವ ಕಮೀಷನ್ ಕಲಿ ಆಳುಗಳಿಗೆ ಸಂಬಳ ನೀಡಲು ಸಾಕಾಗುತ್ತಿಲ್ಲ. ಇದರ ನಡುವೆ ಗ್ರಾಹಕರಿಂದ ಹಣ ವಸೂಲಿ, ತೂಕದಲ್ಲಿ ಮೋಸ, ಖಾಲಿ ಗೋಣಿ ಚೀಲಕ್ಕೆ ಹಣ ಕೇಳಲಾಗುತ್ತಿದೆ ಎನ್ನುವ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕನಸಿನ ಕೂಸಿನ ಅನ್ನಭಾಗ್ಯ ಯೋಜನೆಗೆ ಕನ್ನಹಾಕುವ ಕೆಳಮಟ್ಟಕ್ಕೆ ವಿತರಕರು ಇಳಿದಿಲ್ಲ. ಇಲ್ಲಸಲ್ಲದ ದೂರು ಹೇಳುವವರನ್ನು ಹೊರಗಿಟ್ಟು ನ್ಯಾಯಯುತ ಬೇಡಿಕೆ ಈಡೇರಿಸಿ ಎಂದು ಸಭೆಯ ಗಮನ ಸೆಳೆದರು. ಲಾಳನಕೆರೆ ನಿಂಗೇಗೌಡ, ಕುಡುಕುಂದಿ ಪ್ರಕಾಶ ಇನ್ನಿತರರು ದನಿಗೂಡಿಸಿದರು. ಆಹಾರ ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ಬಾಲಚಂದ್ರು ಸಮಸ್ಯೆ ಕುರಿತು ಸಭೆಗೆ ಉತ್ತರ ನೀಡಿದರು.

ಎಲ್ಲವನ್ನೂ ಸಮಾಧಾನದಿಂದ ಆಲಿಸಿದ ಆದ್ಯಕ್ಷ ಧರ್ಮಶೇಖರ್ ಹಾಗೂ ಉಪಾಧ್ಯಕ್ಷ ಜವನಪ್ಪ ಉತ್ತರಿಸಿ, ಸಮಸ್ಯೆಯ ಗಂಭೀರತೆ ಅರಿಯುವ ದೃಷ್ಟಿಯಿಂದಲೇ ಪಡಿತರ ವಿತರಕರನ್ನು ಸಮಿತಿ ಸಭೆಗೆ ಆಹ್ವಾನಿಸಲಾಗಿದೆ. ವಾಸ್ತವ ಸ್ಥಿತಿಯನ್ನು ಸರ್ಕಾರ ಹಾಗೂ ಶಾಶಕರ ಗಮನಕ್ಕೆ ತಂದು ಲೋಪ ಸರಿಪಡಿಸುವುದಾಗಿ ಭರವಸೆ ನೀಡಿದರು. ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಅನುಷ್ಠಾನದ ಸಾಧಕ, ಬಾಧಕ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ತಾಪಂ ಇಒ ಸತೀಶ್, ಸದಸ್ಯರಾದ ಜಾಜೂರು ಸಿದ್ದೇಶ್, ಕೆಸಿಡಿ ಕುಮಾರ್, ಕಮಲಮ್ಮ, ಪರಮೇಶ್, ಸಿರಾಜ್, ರಮೇಶ್, ಪ್ರದೀಪ್, ಕೃಷ್ಣೇಗೌಡ, ಪುರುಷೋತ್ತಮ್ ಲೋಕೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net