ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ

23 SARAG 3
ಸರಗೂರು ತಾಲೂಕಿನ ಸಮೀಪದ ಹೆಡಿಯಾಲ ಅರಣ್ಯ ಇಲಾಖೆ ಆವರಣದಲ್ಲಿ ಜನ ಸಂಪರ್ಕ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. ದರ್ಶನ್ ಧ್ರುವನಾರಾಯಣ, ಗಣೇಶ ಪ್ರಸಾದ್, ಮಹಾದೇವಿ, ದಿನೇಶ್, ಸುಭಾಷ್ ಕೆ.ಮಲ್ಖೇಡೆ ಇತರರು ಇದ್ದರು.
Published on

ಸರಗೂರು: ಮಾನವ-ವನ್ಯಜೀವಿಗಳ ಸಂಘರ್ಷದ ವಿಚಾರ ಗಂಭೀರವಾದದ್ದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಎಚ್ಚರಿಸಿದರು.


ತಾಲೂಕಿನ ಹೆಡಿಯಾಲ ಅರಣ್ಯ ವಲಯದ ಆವರಣದಲ್ಲಿ ಮಂಗಳವಾರ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿ, ಅರಣ್ಯ, ಸಸ್ಯ ಹಾಗೂ ಪ್ರಾಣಿ ಪಕ್ಷಿ ಸಂಕುಲದ ಸಂರಕ್ಷಣೆಯೇ ಅರಣ್ಯ ಇಲಾಖೆ ಆದ್ಯ ಕರ್ತವ್ಯವಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನ ಅರಣ್ಯ ಇಲಾಖೆಯಿಂದ ಕಲ್ಪಿಸಿರುವ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ನಂಜನಗೂಡಿನ ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಹುಲಿ ದಾಳಿಗೆ ಮೃತಪಟ್ಟಿದ್ದ ಮಹಿಳೆಯ ಕುಟುಂಬವನ್ನು ಭೇಟಿ ನೀಡಿ ಸ್ವಾಂತನ ಹೇಳಿದ್ದು, ಇಲಾಖೆ ಅಧಿಕಾರಿಗಳು 15 ಲಕ್ಷ ರೂ. ಪರಿಹಾರ, ಅವರ ಕುಟುಂಬದ ಒಬ್ಬರಿಗೆ ಕೆಲಸ ನೀಡಿದ್ದಾರೆ ಎಂದು ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ಪ್ರಾಣಿಗಳಿಂದ ಸಾವು ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿದೆ. ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ವನ್ಯಜೀವಿಗಳ ದಾಳಿಯಿಂದ 60 ಸಾವು ಸಂಭವಿಸಿದ್ದು, ಇದರಲ್ಲಿ 29 ಸಾವು ಆನೆಗಳಿಂದಲೇ ಆಗಿದೆ. ಅರಣ್ಯಕ್ಕೆ ಎದುರಾಗುವ ಪ್ರಮುಖ ಆಪತ್ತು ಕಾಳ್ಗಿಚ್ಚು ತಡೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.


ಆನೆಗಳು ನಾಡಿಗೆ ಬರುವುದರಿಂದ ಅಪಾಯ ಹೆಚ್ಚು. ಇದನ್ನು ತಡೆಯಲು ರಾಜ್ಯದಲ್ಲಿ ಸುಮಾರು 641 ಕಿ.ಮೀ. ರೈಲ್ವೆ ಕಂಬಿ ಬ್ಯಾರಿಕೇಡ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಈ ಪೈಕಿ 310 ಕಿ.ಮೀ. ಪೂರ್ಣವಾಗಿದೆ. ಒಂದು ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಲು ಒಂದೂವರೆ ಕೋಟಿ ರೂ. ವೆಚ್ಚವಾಗುತ್ತದೆ. ಉಳಿದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ಮಾತುಕತೆ ನಡೆಸಿ ಬಜೆಟ್‌ನಲ್ಲಿ ಹೆಚ್ಚಿನ ಹಣ ಕೋರಲಾಗಿದೆ ಎಂದು ಮಾಹಿತಿ ನೀಡಿದರು.


ಅರಣ್ಯ ಇಲಾಖೆ ವ್ಯಾಪ್ತಿಯ ಜಮೀನಿನ ರೈತರು ಸಾಗುವಳಿ ಪತ್ರ ನೀಡಿಲ್ಲ ಎಂದು ಸಚಿವರ ಗಮನಸೆಳೆದರು. ಕಾಡು ಪ್ರಾಣಿಗಳ ದಾಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸಾವು-ನೋವು ಸಂಭವಿಸಿವೆ. ಕಾಡುಗಳಿಂದ ಜಮೀನಿನಲ್ಲಿ ಬೆಳೆದ ಫಸಲು ಮನೆಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಕೂಡಲೇ ಕಾಡಂಚಿನ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಸ್ಥಳದಲ್ಲೇ ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ, ಗುಂಡ್ಲುಪೇಟೆ ಶಾಸಕ ಗಣೇಶ ಪ್ರಸಾದ್ ಮಾತನಾಡಿದರು. ಹೆಡಿಯಾಲ ಗ್ರಾಪಂ ಅಧ್ಯಕ್ಷೆ ಮಹಾದೇವಿ, ಗ್ರಾಪಂ ಉಪಾಧ್ಯಕ್ಷ ದಿನೇಶ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಕೆ.ಮಲ್ಖೇಡೆ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಅರಣ್ಯ ಸಂರಕ್ಷಣಾಧಿಕಾರಿ ಪಿ. ರಮೇಶ್‌ಕುಮಾರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಹಾದನೂರು ಗ್ರಾಪಂ ಉಪಾಧ್ಯಕ್ಷ ಪ್ರಕಾಶ್, ಗೋವಿಂದರಾಜು, ಶ್ರೀನಿವಾಸ, ಗ್ರಾಮೀಣ ಮಹೇಶ್, ವಾಲ್ಮೀಕಿ ಸಿದ್ದರಾಜು, ಇಂದ್ರಕುಮಾರ್, ಮಹಾದೇವಯ್ಯ, ಮಾರುತಿ, ಮಹದೇವಸ್ವಾಮಿ, ವಿವಿಧ ಗ್ರಾಮಗಳ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net