ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡೂರು ಗ್ರಾಮದಲ್ಲಿ ಅನಧಿಕೃತವಾಗಿ ಜಲ್ಲಿ ಕ್ರಷರ್ ಗಣಿಗಾರಿಕೆ ಕಾರ್ಯಾಚರಿಸುತ್ತಿದ್ದು, ಅನಧಿಕೃತ ಜಲ್ಲಿ ಕೃಷರ್ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಣಿ ಇಲಾಖೆ ಅನುಮತಿ ಇಲ್ಲದ ಜಲ್ಲಿ ಕ್ರಷರ್ಗಳಿಗೆ ಪರವಾನಗಿ ನೀಡಬಾರದು ಎಂದು ಸದಸ್ಯರು ನೆಟ್ಟಣಿಗೆ ಮುಡ್ನೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.
ಅಧ್ಯಕ್ಷೆ ಫೌಝಿಯಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಜಲ್ಲಿ ಕ್ರಷರ್ ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಬಂದಿದೆ ಎಂದು ಪಿಡಿಒ ಸುಬ್ಬಯ್ಯ ತಿಳಿಸಿದಾಗ ಸದಸ್ಯರು ಬೇಡಿಕೆ ಮಂಡಿಸಿದರು. ಸಂಜೆ ಸಮಯದಲ್ಲಿ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ದೊಡ್ಡ ಶಬ್ದ ಕೇಳಿಬರುತ್ತಿರುವುದರಿಂದ ಮಕ್ಕಳು, ಗರ್ಭಿಣಿಯರ ಸಹಿತ ಎಲ್ಲರಿಗೂ ತೊಂದರೆಯಾಗುತ್ತದೆ. ಹಾಗಾಗಿ ಗ್ರಾಮದಲ್ಲಿ ಇರುವ ಅನಧಿಕೃತ ಜಲ್ಲಿ ಕ್ರಷರ್ ಗಣಿಗಾರಿಕೆ ಸ್ಥಗಿತಗೊಳಿಸಬೇಕು. ಅಲ್ಲದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಗ್ರಾಪಂ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯರಾದ ರಮೇಶ್ ರೈ ಸಾಂತ್ಯ, ಶ್ರೀರಾಮ್ ಪಕ್ಕಳ ಕರ್ನೂರುಗುತ್ತು, ಇಬ್ರಾಹಿಂ ಪಳ್ಳತ್ತೂರು, ವೆಂಕಪ್ಪ ನಾಯ್ಕ, ಮಹಮ್ಮದ್ ರಿಯಾಯ್, ಚಂದ್ರಹಾಸ ಈಶ್ವರಮಂಗಲ, ಪ್ರದೀಪ್ ಕುಮಾರ್ ರೈ, ಲಲಿತಾ, ಪ್ರುಲ್ಲಾ ರೈ ಬೇಡಿಕೆ, ಸಲಹೆಗಳನ್ನು ಸಭೆಯ ಮುಂದಿಟ್ಟರು. ಸದಸ್ಯರಾದ ಸುಮ್ಮಯ್ಯ, ಲಲಿತಾ, ಶಶಿಕಲಾ, ಕುಮಾರನಾಥ, ವತ್ಸಲಾ, ಇಂದಿರಾ, ಕುಸುಮಾ, ಸಿಬ್ಬಂದಿ ಶೀನಪ್ಪ, ಚಂದ್ರಶೇಖರ್ ಮೊದಲಾದವರಿದ್ದರು.
ಪೊಲೀಸ್ ಠಾಣೆಗೆ ಸ್ವಂತ ಕಟ್ಟಡ ಬೇಡಿಕೆ
ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಈಶ್ವರಮಂಗಲ ಪೊಲೀಸ್ ಹೊರಠಾಣೆೆಗೆ ಜಾಗ ಮಂಜೂರಾಗಿದ್ದರೂ ಇದೀಗ ಮತ್ತೆ ಮತ್ತೊಂದು ಕಡೆಯ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಪೊಲೀಸ್ ಹೊರ ಠಾಣೆಗೆ ಮಂಜೂರಾಗಿರುವ ಜಾಗದಲ್ಲಿ ಸ್ವಂತ ಕಟ್ಟಡ ನಿರ್ಮಾಣದ ಅಗತ್ಯವಿದೆ ಎಂದ ಸದಸ್ಯರು, ಈ ಬಗ್ಗೆ ಸಂಬಂಧಪಟ್ಟವರಿಗೆ ಬರೆದುಕೊಳ್ಳಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಐಜಿಪಿ, ಜಿಲ್ಲಾ ಎಸ್ಪಿ ಮತ್ತು ಶಾಸಕರಿಗೆ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು.
ಗ್ರಾಮ ಆಡಳಿತಾಧಿಕಾರಿ ಬದಲಾವಣೆಗೆ ಆಗ್ರಹ
ಗ್ರಾಮ ಆಡಳಿತಾಧಿಕಾರಿ ಸಕಾಲದಲ್ಲಿ ಕೆಲಸ ಕಾರ್ಯಗಳನ್ನು ಮಾಡದ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು, ಕೂಡಲೇ ಗ್ರಾಮ ಆಡಳಿತಾಧಿಕಾರಿ ಬದಲಾವಣೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ನಿರಂತರ ರಜೆ ಹಾಕುತ್ತಿರುವ ಜನರಿಗೆ ತೊಂದರೆಯಾಗುತ್ತಿದೆ. ಅವರು ಕಚೇರಿಯಲ್ಲಿದ್ದರೂ ಗ್ರಾಮಸ್ಥರ ೆನ್ ಕರೆಗಳನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ ಎಂದ ಸದಸ್ಯರು, ಅವರು ಕಚೇರಿಯಲ್ಲಿದ್ದರೂ ಗ್ರಾಪಂ ಸದಸ್ಯರ ಫೋನ್ ಕರೆಗಳನ್ನು ಕೂಡ ನಿರ್ಲಕ್ಷಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರೊಂದಿಗೆ ಸ್ಪಂದನೆ ನೀಡದ ಅವರನ್ನು ಬದಲಾಯಿಸುವುದೇ ಸೂಕ್ತ ಎಂದು ಸದಸ್ಯರು ಅಭಿಪ್ರಾಯಪಟ್ಟರು.