

ಬೆಂಗಳೂರು: ಆಟೋ ಚಾಲನೆ ವೇಳೆ ಸಮವಸ್ತ್ರ ಧರಿಸದೆ ಮತ್ತು ಡಿಸ್‌ಪ್ಲೇ ಕಾರ್ಡ್ ಇಲ್ಲದೆ ಸಂಚರಿಸುವ ರೀಕ್ಷಾಗಳ ಫೋಟೋ ಸೆರೆ ಹಿಡಿದು ‘ಪಬ್ಲಿಕ್ ಐ ಆ್ಯಪ್’ ಮೂಲಕ ಹಂಚಿಕೊಳ್ಳುವಂತೆ ನಗರ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಮವಸ್ತ್ರ ಧರಿಸದೆ, ಚಾಲಕ ಮತ್ತು ಆಟೋ ರಿಕ್ಷಾದ ಮಾಹಿತಿ ಇರುವ ಡಿಸ್‌ಪ್ಲೇ ಕಾರ್ಡ್ ಹಾಕದಿರುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬರುತ್ತಿವೆ. ಹೀಗಾಗಿ ಸಂಚಾರ ನಿಯಮ ಉಲ್ಲಂಘಿಸುವ ಆಟೋ ರಿಕ್ಷಾ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಸಾರ್ವಜನಿಕರು ಸಹ ಪೊಲೀಸರ ಜತೆ ಕೈ ಜೋಡಿಸಬೇಕು. ನಿಯಮ ಉಲ್ಲಂಸುವ ಚಾಲಕ, ಆಟೋ ಫೋಟೋ ತೆಗೆದು ಪಬ್ಲಿಕ್ ಐ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ. ಫೋಟೋ ಹಂಚಿಕೊಳ್ಳುವರ ಮಾಹಿತಿಯನ್ನು ಗೌಪ್ಯವಾಗಿರಿಸುವುದಾಗಿ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಭರವಸೆ ನೀಡಿದ್ದಾರೆ.