ಅಭಿನಯ ತರಬೇತಿ ಕಾರ್ಯಾಗಾರ ಉದ್ಘಾಟನೆ

IMG-20240918-WA0026-1.jpg
Published on

ಹುಬ್ಬಳ್ಳಿ: ಅವಕಾಶಗಳು ಪದೇಪದೆ ಬರುವುದಿಲ್ಲ, ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹೇಳಿದರು.

ಇಲ್ಲಿಯ ಸುನಿಧಿ ಕಲಾ ಸೌರಭವು ಇಲಾಖೆ ಸಹಯೋಗದಲ್ಲಿ ತಾಲೂಕಿನ ಸುತಗಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಬುಧವಾರ ಏರ್ಪಡಿಸಿದ್ದ ಒಂದು ವಾರದ ಅಭಿನಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮೊದಲೆಲ್ಲ ಅವಕಾಶಗಳು ಕಡಿಮೆ ಇರುತ್ತಿದ್ದವು. ಇಂದಿನ ಮಕ್ಕಳಿಗೆ ಸಾಕಷ್ಟು ಅವಕಾಶಗಳು ಒಲಿದು ಬರುತ್ತವೆ. ಅವುಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ಬೇಕು. ಮಕ್ಕಳಿಗಾಗಿ ಇಂತಹ ಕಾರ್ಯಾಗಾರ ಆಯೋಜಿಸಿರುವ ಸುನಿಧಿ ಕಲಾ ಸೌರಭದ ಕಾರ್ಯ ಶ್ಲಾಘನೀಯವಾದದ್ದು ಎಂದರು.

ರಂಗಭೂಮಿ ತಜ್ಞ ಡಾ. ಶಶಿಧರ ನರೇಂದ್ರ ಮಾತನಾಡಿ, ಕಲಾ ಸೌರಭ ಕಳೆದ ಹತ್ತಾರು ವರ್ಷಗಳಿಂದ ಮಹಿಳೆಯರು ಮತ್ತು ಮಕ್ಕಳಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈ ಮೂಲಕ ಸಾಂಸ್ಕೃತಿಕ ಹಿರಿಮೆ ಮೆರೆಯುತ್ತಿದೆ ಎಂದರು.

ಸುನಿಧಿ ಕಲಾ ಸೌರಭ ಅಧ್ಯಕ್ಷ, ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ವೀಣಾ ಅಠವಲೆ ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಆಶಾಬೇಗಂ ಮುನವಳ್ಳಿ ಸ್ವಾಗತಿಸಿದರು. ಶಿಕ್ಷಕಿ ವಿದ್ಯಾ ಕುಲಕರ್ಣಿ ವಂದಿಸಿದರು.

ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಕುಂಬಾರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ಹೆಬ್ಬಾರ, ತಿಮ್ಮಾರೆಡ್ಡಿ, ಶಿಕ್ಷಕರು, ಐವತ್ತಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net