

ಹುಬ್ಬಳ್ಳಿ: ಮಕ್ಕಳಲ್ಲಿ ಅಡಗಿರುವ ಕಲಾ ಪ್ರತಿಭೆ ಚಿಗುರೊಡೆದು ಮರವಾಗಿ ಫಲ ಕೊಡಬೇಕಾದರೆ ಅದಕ್ಕೆ ಪ್ರೋತ್ಸಾಹ ಅಗತ್ಯ, ಈ ದಿಸೆಯಲ್ಲಿ ಸರ್ಕಾರಿ ಶಾಲೆ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಭಿನಯ ತರಬೇತಿ ನೀಡುತ್ತಿರುವುದು ಅವರಿಗೆ ಪೂರಕ ವಾತಾವರಣ ನಿರ್ಮಿಸಲಿದೆ ಎಂದು ಧಾರವಾಡ ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಹೇಳಿದರು.
ಇಲ್ಲಿಯ ಸುನಿಧಿ ಕಲಾ ಸೌರಭ ವತಿಯಿಂದ ನಗರದ ದೇವಾಂಗಪೇಟ ಚೈತನ್ಯ ಧಾಮದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಭಿನಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ 20 ವರ್ಷಗಳಿಂದ ಇಂತಹ ತರಬೇತಿ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಕ್ಕಳಿಗೆ ಬಹಳ ಅನುಕೂಲವಾಗಿದೆ ಎಂದರು.
ಶಿಬಿರಕ್ಕೆ ಚಾಲನೆ ನೀಡಿದ ಕಾಮಾಕ್ಷಿ ಮಹಿಳಾ ಮಂಡಳದ ಮಾಜಿ ಅಧ್ಯಕ್ಷೆ ಮಂಗಲಾ ನಾಡಕರ್ಣಿ ಮಾತನಾಡಿ, ಸುನಿಧಿ ಕಲಾ ಸೌರಭ ಅಭಿನಯ ತರಬೇತಿ ಶಿಬಿರದ ಮೂಲಕ ಮಕ್ಕಳಲ್ಲಿ ಕಲಾಸಕ್ತಿ ಬೆಳೆಸುವುದರ ಜತೆಗೆ ಪ್ರತಿಭೆ ಹೊರತರುತ್ತಿದ್ದಾರೆ ಎಂದರು.
ಯೋಗ ಶಿಕ್ಷಕ ಎಂ.ಜಿ. ನೀಲಕಂಠನವರ, ಶ್ರೀರಂಗ ತಿಳವಳ್ಳಿ ಮಾತನಾಡಿದರು.
ಶುಭಾಂಗಿ ನರೇಂದ್ರ, ಕಲಾವತಿ ಶಿಂಧೆ, ಸುಧಾ ಕೇಸರಕರ, ಸಂಧ್ಯಾ ದೀಕ್ಷಿತ, ಪದ್ಮಜಾ ಉರ್ಮಜಿ, ಪದ್ಮಜಾ ಕಟ್ಟಿಮನಿ, ಕವಿತಾ ನೀಲಗುಂದ, ಆಶಾ ಬೇಗಂ ಮುನವಳ್ಳಿ, ಬಸವರಾಜ ಗಾಯದ, ಎಸ್.ವಿ. ನೀಲಗುಂದ, ಬಸವರಾಜ ನರಸಾಪುರ, ದೇವರಾಜ ಲಾಳಿ, ಗಣಪತಿ ಪ್ರಭು, ಲಕ್ಷ್ಮಣ ಸುಣಗಾರ ಭಾಗವಹಿಸಿದ್ದರು.
ಸುನಿಧಿ ಕಲಾ ಸೌರಭದ ಕಾರ್ಯದರ್ಶಿ ವೀಣಾ ಅಠವಲೆ ಸ್ವಾಗತಿಸಿದರು. 15ಕ್ಕೂ ಹೆಚ್ಚು ಮಕ್ಕಳು ತರಬೇತಿಗೆ ಹಾಜರಾಗಿದ್ದಾರೆ.