ವೈಜ್ಞಾನಿಕ ಚಿಂತನೆಯಿಂದ ಕಾರ್ಯನಿರ್ವಹಿಸಿ

26 CKM 2
ಚಿಕ್ಕಮಗಳೂರಲ್ಲಿ ಏರ್ಪಡಿಸಿದ್ದ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ತರಬೇತಿ ಹಾಗೂ ವಿಜ್ಞಾನ ಶಿಕ್ಷಕರ ಒಂದು ದಿನದ ಕಾರ್ಯಾಗಾರವನ್ನು ಎ.ಎನ್.ಮಹೇಶ್ ಉದ್ಘಾಟಿಸಿದರು. ಕೌಸರ್ ಫಾತಿಮಾ ಬಿಇಒ ಎಚ್.ಸಿ.ರವೀಶ್, ಸತ್ಯನಾರಾಯಣ್, ಎಚ್.ಎಂ.ನೀಲಕಂಠಪ್ಪ ಇದ್ದರು.
Published on

ಚಿಕ್ಕಮಗಳೂರು: ವಿಜ್ಞಾನ ಶಿಕ್ಷಕರು ವೈಜ್ಞಾನಿಕ ಚಿಂತನೆಯಿಂದ ಕಾರ್ಯನಿರ್ವಹಿಸುವ ಮೂಲಕ ವಿದ್ಯಾರ್ಥಿಗಳ ಅರಿವಿನ ಮಟ್ಟ ವೃದ್ಧಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ವಿಜ್ಞಾನ ಪರಿಷತ್ ಗೌರವಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ಮಲೆನಾಡು ವಿದ್ಯಾಸಂಸ್ಥೆಯ ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾ ವಿಜ್ಞಾನ ಪರಿಷತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಏರ್ಪಡಿಸಿದ್ದ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ತರಬೇತಿ ಹಾಗೂ ವಿಜ್ಞಾನ ಶಿಕ್ಷಕರ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪ್ರಾಕ್ಟಿಕಲ್ ಕ್ಲಾಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕು. ಈ ಮೂಲಕ ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಅಣಿಗೊಳಿಸಬೇಕು ಎಂದು ಹೇಳಿದರು.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಜ್ಞಾನ ಸಮಾವೇಶಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಗುರುತರ ಜವಾಬ್ದಾರಿ ವಿಜ್ಞಾನ ಶಿಕ್ಷಕರ ಮೇಲಿದೆ. ಈ ಹಿಂದೆ ಜಿಲ್ಲೆಯ ಹಲವು ವಿದ್ಯಾರ್ಥಿಗಳು ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ವರ್ಷವೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸಮಾವೇಶಕ್ಕೆ ಕಳುಹಿಸುವ ಜವಾಬ್ದಾರಿ ವಿಜ್ಞಾನ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಮಂಡಳಿ ಸದಸ್ಯ ಟಿ.ಕೆ.ಜಿ.ಅರಸ್ ಮಾತನಾಡಿ, ನರಸಿಂಹಯ್ಯ ಅವರು ಸ್ಥಾಪಿಸಿದ ವಿಜ್ಞಾನ ಪರಿಷತ್ ಇದೀಗ ರಾಜ್ಯಾದಾದ್ಯಂತ ಸರ್ಕಾರದ ಅನುದಾನದ ಮೂಲಕ ವ್ಯಾಪಿಸಿಕೊಂಡಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಪ್ರತಿಭೆ ಅನಾವರಣ ಮಾಡಲು ಕಾರಣವಾಗಿದೆ ಎಂದರು.
ಮುಂದಿನ ತಿಂಗಳು ಜಿಲ್ಲಾಮಟ್ಟದ ವಿಜ್ಞಾನ ಸಮಾವೇಶ ನಡೆಯಲಿದ್ದು, ಮಕ್ಕಳನ್ನು ಸೂಕ್ತ ರೀತಿಯಲ್ಲಿ ಸಿದ್ದಗೊಳಿಸಲು ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ನಿಮ್ಮ ಶಾಲೆ ಮಕ್ಕಳಿಗೆ ವಿಜ್ಞಾನದ ಅರಿವು ಮೂಡಿಸಿ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ವಿಜ್ಞಾನ ಪರಿಷತ್ ಕಳೆದ ನಾಲ್ಕು ದಶಕಗಳಿಂದ ವಿಜ್ಞಾನ ಕಾರ್ಯಕ್ರಮ ಆಯೋಜಿಸುತ್ತಿದೆ. ಮಕ್ಕಳಿಗೆ ಪ್ರೋತ್ಸಾಹ ನೀಡಲು ಪರಿಷತ್ ಶಿಕ್ಷಕರಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಜಿಲ್ಲಾ, ರಾಜ್ಯಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಮಕ್ಕಳನ್ನು ಕಳುಹಿಸಿಕೊಡುವ ಕೆಲಸ ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net