

ತರೀಕೆರೆ: ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಮರ್ಪಣಾ ಮನೋಭಾವರಿಂದ ಸಂಸ್ಥೆ ಪ್ರಗತಿಗೆ ಶ್ರಮಿಸಬೇಕು ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಸ್.ಡಿ.ಸೋನಾಲ್‌ಗೌಡ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಹಾಸನ ಹಾಲು ಒಕ್ಕೂಟದ ಸಹಯೋಗದಲ್ಲಿ ಕೊಪ್ಪ, ಎನ್.ಆರ್.ಪುರ, ಅಜ್ಜಂಪುರ ಹಾಗೂ ತರೀಕೆರೆ ತಾಲೂಕಿನ ವಿವಿಧ ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹಾಲು ಉತ್ಪಾದನೆ ಮತ್ತು ಹೈನುಗಾರಿಕೆಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್ ಅಗ್ರ ಸ್ಥಾನ ಅಲಂಕರಿಸಿವೆಯಾದರೂ, ಕರ್ನಾಟಕ ಮಿಲ್ಕ್ ಫೆಡರೇಷನ್ ಸಹಕಾರದಿಂದ ಈ ಬಾರಿ ಕರ್ನಾಟಕವೂ ಹಾಲು ಉತ್ಪಾದನೆ ಹೆಚ್ಚಿಸಿಕೊಂಡು ಪ್ರಗತಿಯತ್ತ ದಾಪುಗಾಲಿಟ್ಟಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದಕ ಸಂಘಗಳ ಕಾರ್ಯದರ್ಶಿಗಳು ಹೈನುಗಾರಿಕೆ ಮೂಲಕ ಹಾಲು ಉತ್ಪಾದನೆಗಿಳಿದಿರುವ ರೈತರಿಗೆ ಉತ್ತಮ ಸ್ಪಂದನೆ ನೀಡಿ ಉತ್ತಮ ಹಾಲು ಉತ್ಪಾದನೆಗೆ ಉತ್ತೇಜಿಸಬೇಕು. ಕೆಎಂಎಫ್‌ನಿಂದ ನೀಡುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಕೊಡಿಸಿಕೊಡಬೇಕು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ದಿವಾಕರ್ ಮಾತನಾಡಿ, ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನಿಂದ ವಿವಿಧ ತಿನಿಸು ತಯಾರಾಗುತ್ತಿದ್ದು, ಉತ್ತಮ ಆದಾಯ ಬರುತ್ತಿದೆ. ಹೈನೋದ್ಯಮ ಬೆಳೆಸಲು ಸರ್ಕಾರದ ಜತೆ ಸಂಘ ಸಂಸ್ಥೆಗಳ ಶ್ರಮ ಮತ್ತು ಪ್ರಯತ್ನ ಹೆಚ್ಚಾಗಬೇಕು. ರೈತರು ಗುಣಮಟ್ಟದ ಹಾಲು ನೀಡಿ ಕೆಎಂಎಫ್ ಬಲವರ್ಧನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೆಎಂಎಫ್ ವೈದ್ಯಾಧಿಕಾರಿ ಡಾ.ಪ್ರಸನ್ನ ಹಾಗೂ ಸಹಾಯಕ ವ್ಯವಸ್ಥಾಪಕ ರನ್ನಕುಮಾರ್ ಕಾರ್ಯದರ್ಶಿಗಳಿಗೆ ವಿಶೇಷ ತರಬೇತಿ ನೀಡಿದರು. ಹಾಸನ ಹಾಲು ಒಕ್ಕೂಟದ ನಿರ್ದೇಶಕರಾದ ಟಿ.ಜಗದೀಶ್, ಆಶಾ, ಸಿಇಒ ಎಚ್.ಕೆ.ಯಶಸ್, ಕೆಎಂಎಫ್ ಅಧಿಕಾರಿಗಳಾದ ಯದುರಾಜ್, ಭರತ್, ಅಕ್ಕನಾಗಮ್ಮ, ಇಂದ್ರೇಶ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಪಿ.ಶಶಿಕುಮಾರ್, ಮಾಜಿ ಅಧ್ಯಕ್ಷ ಎಂ.ನರೇಂದ್ರ ಮತ್ತಿತರರಿದ್ದರು.