ಬಿಜೆಪಿ ಸದಸ್ಯತ್ವ ಹೆಚ್ಚಿಸಲು ಕ್ರಿಯಾಶೀಲರಾಗಿ ಕಾರ್ಯ ಮಾಡಿ

BJP Membership, Former MLA A.S.Patila Nadahalli, Muddebihala,
ಮುದ್ದೇಬಿಹಾಳ ಪಟ್ಟಣದಲ್ಲಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿದರು.
Published on

ಮುದ್ದೇಬಿಹಾಳ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 3 ಪಟ್ಟಣ, 110ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬಿಜೆಪಿಯ ಅಂದಾಜು 50 ಸಾವಿರ ಸದಸ್ಯರನ್ನು ನೇಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದನ್ನು ಈಡೇರಿಸುವಲ್ಲಿ ಪಕ್ಷದ ಎಲ್ಲ ಹಂತಗಳ ಮುಖಂಡರು, ಪದಾಧಿಕಾರಿಗಳ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಇಲ್ಲಿನ ನಡಹಳ್ಳಿ ಾರ್ಮಹೌಸ್‌ನಲ್ಲಿ ಸೋಮವಾರ ನಡೆದ ಮುದ್ದೇಬಿಹಾಳ ಮಂಡಲ ಪದಾಧಿಕಾರಿಗಳು, ಸದಸ್ಯತ್ವ ಅಭಿಯಾನ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಳ್ಳಲು ಅನೇಕರು ಮುಂದಾಗಿದ್ದಾರೆ. ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಕ್ರಿಯ ಸದಸ್ಯರು ಮತ್ತು ಪ್ರಾಥಮಿಕ ಸದಸ್ಯರನ್ನು ನೇಮಿಸುವ ಕೆಲಸ ಭರದಿಂದ ನಡೆಯುತ್ತಿದೆ. 100 ಪ್ರಾಥಮಿಕ ಸದಸ್ಯರನ್ನು ನೇಮಿಸುವವರಿಗೆ ಸಕ್ರಿಯ ಸದಸ್ಯತ್ವ ನೀಡಲಾಗುತ್ತದೆ. ಪಕ್ಷ ಸಂಘಟನೆಯಲ್ಲಿ ಇವರ ಪಾತ್ರ ಅತ್ಯಂತ ಮಹತ್ವದ್ದಾಗಿರುವ ಕಾರಣ ಕೆಳಹಂತದ ಕಾರ್ಯಕರ್ತರಿಗೆ ಹೆಚ್ಚಿನ ಮನ್ನಣೆ ಕೊಡಲಾಗುತ್ತದೆ ಎಂದರು.

ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಮಾತನಾಡಿ, ಇದುವರೆಗೆ ಸದಸ್ಯತ್ವದ ಕುರಿತು ನಡೆಸಿರುವ ಚಟುವಟಿಕೆಗಳ ಮಾಹಿತಿ ನೀಡಿ ಯಾರ‌್ಯಾರಿಗೆ ಪ್ರಮುಖ ಜವಾಬ್ದಾರಿ ವಹಿಸಿಕೊಡಲಾಗಿದೆ ಎನ್ನುವುದನ್ನು ಮಂಡಿಸಿದರು. ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಸದಾಶಿವ ಮಾಗಿ, ಚನ್ನಪ್ಪ ಕಂಠಿ, ಅಶೋಕ ವನಹಳ್ಳಿ, ಬಸವರಾಜ ಮುರಾಳ, ಪಕ್ಷದ ಪ್ರಮುಖರಾದ ವಿಜಯಕುಮಾರ ಬಡಿಗೇರ, ರಾಮು ಪೂಜಾರಿ, ಸುಭಾಷ ಮಾದರ, ರವೀಂದ್ರ ಬಿರಾದಾರ, ಲಕ್ಷ್ಮಣ ಬಿಜ್ಜೂರ, ಜೆಡಿಎಸ್ ಮುಖಂಡ ಪ್ರಭುಗೌಡ ಪಾಟೀಲ, ರಾಜು ಕಾಶಿನಕುಂಟಿ, ಸಂಜು ಬಾಗೇವಾಡಿ, ತಾಳಿಕೋಟೆ, ನಾಲತವಾಡ ಭಾಗದ ಮುಖಂಡರು, ಪಕ್ಷದ ಸಕ್ರಿಯ ಕಾರ್ಯಕರ್ತರು, ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇಂದು ನಡಹಳ್ಳಿಯವರಿಂದ ಚಾಲನೆ
ಬಿಜೆಪಿ ರಾಜ್ಯ ಘಟಕದ ನಿರ್ದೇಶನದಂತೆ ನಡೆಯಲಿರುವ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಸೆ.3 ರಂದು ಬೆಳಗ್ಗೆ 8 ಗಂಟೆಗೆ ಮುದ್ದೇಬಿಹಾಳ ಪಟ್ಟಣದ ಸಂಗಮೇಶ್ವರನಗರ ಬಡಾವಣೆಯಲ್ಲಿ ಚಾಲನೆ ನೀಡಲಿದ್ದಾರೆ. ಪಕ್ಷದ ಮುಖಂಡರು, ಪುರಸಭೆ ಸದಸ್ಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮುದ್ದೇಬಿಹಾಳ ಮಂಡಲ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net