ನಿಷ್ಪಕ್ಷಪಾತ, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ

13 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭೆ ಚುನಾವಣೆಗೆ ಧಾರವಾಡ ಮತೇತ್ರದ ಮತಗಟ್ಟೆಗಳಿಗೆ ನೇಮಕವಾದ ಮತಗಟ್ಟೆ ಅಧ್ಯಾಧಿಕಾರಿ (ಪಿಆರ್​ಒ) ಮತ್ತು ಸಹಾಯಕ ಮತಗಟ್ಟೆ ಅಧ್ಯಾಧಿಕಾರಿ(ಎಪಿಆರ್​ಓ)ಗಳು ನಿಷ್ಪಕ್ಷಪಾತ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ವಿದ್ಯಾಗಿರಿ ಜೆಎಸ್​ಎಸ್​ ಕಾಲೇಜು ಆವರಣದಲ್ಲಿ ಚುನಾವಣೆಯ ಮತಗಟ್ಟೆಗಳಿಗೆ ನೇಮಕವಾಗಿರುವ ಪಿಆರ್​ಒ, ಎಪಿಆರ್​ಒಗಳಿಗೆ ಶನಿವಾರ ಆಯೋಜಿಸಿದ್ದ ಮೊದಲ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗ ನೀಡಿದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಆರ್​ಒ, ಎಆರ್​, ಪಿಆರ್​ಒಗಳಿಗೆ ಚುನಾವಣಾ ಆಯೋಗ ನೀಡಿರುವ ಶಾಸನಬದ್ಧ ಅಧಿಕಾರ ಮತ್ತು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಸೆಕ್ಟರ್​ ಆಫೀಸರ್​, ಹಿರಿಯ ಅಕಾರಿಗಳ ಸಲಹೆ ಪಡೆದು, ಚುನಾವಣಾ ನಿಯಮಗಳ ಅನುಸಾರ ಕೆಲಸ ಮಾಡಬೇಕು ಎಂದರು.
ಮತದಾನ ದಿನದಂದು ಬಳಸಲು ಪೂರೈಸುವ ಇವಿಎಂ ಮತ್ತು ವಿವಿ ಪ್ಯಾಟ್​ ಯಂತ್ರಗಳನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ತರಬೇತಿ ದಿನಗಳಂದು ನೀಡುವ ಪ್ರಾಯೋಗಿಕ ತರಬೇತಿಯಲ್ಲಿ ಯಂತ್ರಗಳ ನಿರ್ವಹಣೆ ಕುರಿತು ಸರಿಯಾಗಿ ಅರಿಯಿರಿ. ಯಂತ್ರಗಳು ಚುನಾವಣೆ ಮುಖ್ಯ ಭಾಗವಾಗಿದ್ದರಿಂದ ಜೋಪಾನ ಮಾಡಿಕೊಂಡು ಸುಸ್ಥಿತಿಯಲ್ಲಿ ಇರುವಂತೆ ಬಳಕೆ ಮಾಡಬೇಕು ಎಂದು ಸೂಚಿಸಿದರು.
ಮತದಾನಕ್ಕೆ ಮತದಾರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯ. ಅಂದಾಗ ಮಾತ್ರ ಮತದಾನಕ್ಕೆ ಅರ್ಹರು. ಹೀಗಾಗಿ ಅವರ ಹೆಸರು ಮೊದಲು ಮತದಾರ ಪಟ್ಟಿಯಲ್ಲಿ ಇರುವ ಬಗ್ಗೆ ಖಾತರಿ ಮಾಡಿಕೊಂಡು, ನಂತರ ಉಳಿದ ಅಗತ್ಯ ದಾಖಲಾತಿ ಕೇಳಬೇಕು. ಪಿಆರ್​ಒಗಳಿಗೆ ಮಸ್ಟ್ರಿಂಗ್​ ಹಾಗೂ ಡಿಮಸ್ಟ್ರಿಂಗ್​ ಸುಲಭವಾಗಿ ಮಾಡಿಕೊಡಲು ಅಗತ್ಯ, ನುರಿತ ಸಿಬ್ಬಂದಿ ನೇಮಿಸಲಾಗುವುದು. ಎಲ್ಲರೂ ಸಹಕರಿಸಿ, ಚುನಾವಣೆ ಯಶಸ್ವಿಗೊಳಿಸಲು ಕೈ ಜೋಡಿಸಿ ಎಂದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಸಹಾಯಕ ಚುನಾವಣಾಧಿಕಾರಿ ಪ್ರಿಯಾಂಕಾ ಎಂ., ಶಾಲಂ ಹುಸೇನ್​, ನೋಡಲ್​ ಅಧಿಕಾರಿ ಅಜೀಜ್​ ದೇಸಾಯಿ, ತಹಸೀಲ್ದಾರ ಡಾ.ಡಿ.ಎಚ್​.ಹೂಗಾರ, ಪಾಲಿಕೆ ವಲಯ ಅಧಿಕಾರಿ ಶಂಕರಗೌಡ ಪಾಟೀಲ, ಚುನಾವಣಾ ವಿಭಾಗದ ಅಧಿಕಾರಿ ಉಮೇಶ ಸವಣೂರ, ಕಂದಾಯ ನಿರೀಕ ಗುರು ಸುಣಗಾರ, ಸಂಪತ್ತಕುಮಾರ ವಡೆಯರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net