

ಬೀರೂರು: ಜನ ಸಾಮಾನ್ಯರ ದನಿಯಾಗಿ ಪತ್ರಕರ್ತರು ಕೆಲಸ ನಿರ್ವಹಿಸಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಗುರುಭವನದಲ್ಲಿ ಕಡೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಕರ್ತರ ಸಮ್ಮಿಲನ ಮತ್ತು ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಂಕು-ಡೊಂಕುಗಳ ತಿದ್ದುವ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪರಿಹಾರ ದೊರಕುವ ವಿಶ್ವಾಸದಿಂದ ಸಮಾಜ ನಮ್ಮ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುತ್ತದೆ. ನಾವು ಮಾನವೀಯ ಮೌಲ್ಯಗಳನ್ನು ಉಳಿಸಿ ಜನರಿಗೆ ಒಳಿತು ಮಾಡುವ ದೀಕ್ಷೆ ತೊಟ್ಟು ಎಲ್ಲರ ಒಳಿತಿಗಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ದೃಶ್ಯ ಮಾಧ್ಯಮಗಳು ನೀತಿ, ನಿಯಮಗಳನ್ನು ಗಾಳಿಗೆ ತೂರಿ ಒಂದೇ ವಿಷಯಗಳನ್ನು ಬಿತ್ತರಿಸುತ್ತಾರೆ. ಮುದ್ರಣ ಮಾಧ್ಯಮ ತನ್ನ ನೈತಿಕತೆ ಉಳಿಸಿಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ಪಾತ್ರ ವಹಿಸುವ ಪತ್ರಿಕೆಗಳು ನೈತಿಕತೆ ಮತ್ತು ಪತ್ರಿಕಾ ಧರ್ಮ ಮರೆಯಬಾರದು. ಆಡಳಿತದ ಚುಕ್ಕಾಣಿ ಹಿಡಿದವರನ್ನು ಎಚ್ಚರಿಸುವ ಮಾಧ್ಯಮಗಳು ಹಲವಾರು ಜನಾಂದೋಲನಗಳಿಗೆ ಕಾರಣವಾಗಿವೆ. ಪ್ರಚಲಿತ ವಿದ್ಯಮಾನಗಳ ವಿಶ್ವಾಸಾರ್ಹ ಮಾಹಿತಿ ಒದಗಿಸುವ ಪತ್ರಿಕೆಗಳು ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿ ಜನರ ನಂಬಿಕೆಗೆ ಪಾತ್ರವಾಗಿವೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶೈಕ್ಷಣಿಕ ಪುರವಣಿಗಳ ಮೂಲಕವೂ ಶ್ರಮಿಸುತ್ತಿರುವ ಪತ್ರಿಕೆಗಳ ಪಾತ್ರ ಶ್ಲಾಘನೀಯ ಎಂದರು.
ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಬಿ.ಗುರುಪ್ರಸಾದ್ ಮಾತನಾಡಿ, ಒಳ್ಳೆಯದನ್ನು ಗುರುತಿಸಿ ಅದನ್ನು ಬೆಳಕಿಗೆ ತರುವ ಹೊಣೆ ಪತ್ರಕರ್ತರ ಮೇಲಿದೆ. ಸಮಾಜದ ಸ್ವಾಸ್ಥೃ ಕಾಪಾಡುವ ವರದಿಗಾರಿಕೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಬೀರೂರು ಪಿಎಸ್‌ಐ ಜಿ.ಆರ್.ಸಜಿತ್‌ಕುಮಾರ್, ವಿದ್ಯಾರ್ಥಿ ಹಂತದಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಮಕ್ಕಳ ಜ್ಞಾನಭಂಡಾರ ವೃದ್ಧಿಯಾಗುತ್ತದೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈ.ಎಂ.ಲಕ್ಷ್ಮ್ಮಣ್, ಬಿ.ಎಂ.ನಾಗರಾಜ್, ಶಂಕರ್, ಶ್ರೀನಿವಾಸ್, ಮಂಜುನಾಥ್, ಸಿ.ಕೆ.ಮೂರ್ತಿ, ಆರ್.ಟಿ.ಅಶೋಕ ಇವರನ್ನು ಗೌರವಿಸಲಾಯಿತು. ಕಡೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಗಿರೀಶ್ , ಬೀರೂರು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ವೈದ್ಯಾಧಿಕಾರಿ ಕೆಂಚೇಗೌಡ, ಇದ್ದರು.