

ಹೊಸದುರ್ಗ (ಜಿತ್ರದುರ್ಗ ಜಿಲ್ಲೆ): ತಾಲೂಕಿನ ಮಾಡದಕೆರೆ ಹೋಬಳಿಯ ಬೆನಕನಹಳ್ಳಿಯಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಎರಡು ವರ್ಷದ ಅಡಕೆ ಗಿಡಗಳನ್ನು ಕಡಿದು ಹಾಕಿ, ಇಡೀ ತೋಟವನ್ನು ನಾಶ ಮಾಡಿದ್ದಾರೆ.
ಬೆನಕನಹಳ್ಳಿ ಗ್ರಾಮದ ನಿವಾಸಿ ಬಿ.ಜಿ.ರಂಗನಾಥ ಅವರಿಗೆ ಸೇರಿದ ಮೂರು ಎಕರೆಯಲ್ಲಿ ಬೆಳೆದಿದ್ದ ಎರಡು ವರ್ಷ ಪ್ರಾಯದ 1500ಕ್ಕೂ ಹೆಚ್ಚಿನ ಅಡಕೆ ಗಿಡಗಳನ್ನು ಕಡಿದು ಹಾಕಲಾಗಿದೆ.
ಭಾನುವಾರ ಬೆಳಗ್ಗೆ ತೋಟಕ್ಕೆ ಹೋದಾಗ ಗಿಡಗಳು ತುಂಡಾಗಿ ಬಿದ್ದಿರುವುದನ್ನು ಕಂಡು ಆತಂಕಕ್ಕೆ ಒಳಗಾಗಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹೊಸದುರ್ಗ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಗೆ ಕಾರಣವಾದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ರಂಗನಾಥ್ ಮನವಿ ಮಾಡಿದ್ದಾರೆ.