ಒಣ ಭೂಮಿಯಲ್ಲಿ ಡ್ರ್ಯಾಗನ್ ಬೆಳೆದ ರೈತ

dj clk dragan
Published on


ಕೊರ್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ತಾಲೂಕಿನಲ್ಲಿ ಮಳೆಯಾಶ್ರಿತ ಮತ್ತು ಸಂಪ್ರದಾಯ ಶೇಂಗಾ ಬೆಳೆಯುವ ಪದ್ಧತಿಯಿಂದ ಹಿಮ್ಮುಖರಾಗುತ್ತಿರುವ ರೈತರು, ವಾಣಿಜ್ಯ ಬೆಳೆಗಳತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ.

ಮಿತ ನೀರು, ಕಡಿಮೆ ಖರ್ಚಿನಲ್ಲಿ ಮತ್ತು ಅಲ್ಪ ಅವಧಿಯಲ್ಲಿ ಲಾಭದಾಯಕ ಬೆಳೆಗಳಲ್ಲಿ ಸುಲಭ ದಾರಿ ಕಂಡುಕೊಳ್ಳುವ ಪ್ರಯತ್ನದಲ್ಲಿ ಅನ್ನದಾತ ಇದ್ದಾನೆ.

ಈ ಭಾಗದ ಒಣ ಭೂಮಿಯಲ್ಲಿ 2020ರಲ್ಲಿ ಕೇವಲ 3 ಎಕರೆ ಭೂಮಿಯಲ್ಲಿ ಪ್ರಾಯೋಗಿಕವಾಗಿ ಎಂಬಂತೆ ಪಡಗಲಬಂಡೆ ಗ್ರಾಮದ ರೈತನೊಬ್ಬ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದರು.

ಇದರ ಲಾಭ, ಮಾರಾಟದ ಅವಕಾಶ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಮತ್ತು ಬೇಡಿಕೆ ತಿಳಿದುಕೊಂಡ ಸ್ಥಳೀಯ ರೈತರಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸಿದೆ.

ಪ್ರಸಕ್ತ ವರ್ಷದಲ್ಲಿ ತಾಲೂಕಿನ ಕ್ಯಾದಿಗುಂಟೆ, ಪಡಗಲಬಂಡೆ, ದೇವರೆಡ್ಡಿಹಳ್ಳಿ, ಗೌರಸಮುದ್ರ, ಚೌಳಕೆರೆ, ಬೆಳಗೆರೆ, ವೀರದಿಮ್ಮನಹಳ್ಳಿ, ಗೋರ್ಲಕಟ್ಟೆ ಸೇರಿ ವಿವಿಧ ಭಾಗದಲ್ಲಿ ಬರೋಬ್ಬರಿ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆಯಲಾಗುತ್ತಿದೆ.

ಗೊರ್ಲಕಟ್ಟೆಯ ರೈತ ಎಚ್.ದೇವರಾಜ್ ತನ್ನ ಒಂದು ಎಕರೆ ಜಮೀನಿನಲ್ಲಿ 2 ಸಾವಿರ ಗಿಡಗಳನ್ನು 2022ರಲ್ಲಿ ನಾಟಿ ಮಾಡಿದ್ದರು. ಗಿಡ ಒಂದಕ್ಕೆ 60 ರೂ.ನಂತೆ ಎರಡು ಸಾವಿರ ಗಿಡಗಳನ್ನು ಗುಜರಾತಿನಿಂದ ಆಮದು ಮಾಡಿಕೊಳ್ಳಲಾಗಿತ್ತು.

ಹೊಲದಲ್ಲಿ ಬದುವಿನಿಂದ ಬದಕ್ಕೆ 11ಅಡಿ, ಗಿಡದಿಂದ ಗಿಡಕ್ಕೆ ಏಳು ಅಡಿ ಅಂತರದಲ್ಲಿ 463 ಕಲ್ಲು ಕಂಬಗಳನ್ನು ನೆಟ್ಟು, ಒಂದು ಕಲ್ಲುಕಂಬಕ್ಕೆ ನಾಲ್ಕು ಗಿಡಗಳಂತೆ ನಾಟಿ ಮಾಡಲಾಗಿದೆ.

ಗಿಡಕ್ಕೆ ಒಂದು ಲೀಟರ್‌ನಂತೆ ತುಂತುರು ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡು ನೀರು ಹಾಯಿಸಲಾಗುತ್ತಿದೆ. ರಾಸಾಯನಿಕ ಗೊಬ್ಬರ ಬಳಸದೆ ಕೋಳಿ, ಕುರಿ ಗೊಬ್ಬರ ಬಳಕೆಯಲ್ಲಿ ಗಿಡಗಳ ಆರೈಕೆ ಮಾಡಲಾಗಿದೆ.

ಯಾವುದೇ ರೋಗಭಾದೆ ತಗುಲದೆ ಬೆಳೆದಿರುವ ಡ್ರ್ಯಾಗನ್ ಫ್ರೂಟ್ ಒಂದು ವರ್ಷದ ಬಳಿಕ ಫಸಲಿಗೆ ಬಂದಿದೆ. ಈಗಾಗಲೇ 3 ಟನ್ ಹಣ್ಣನ್ನು ಮುಂಬಯಿಗೆ ಮಾರಾಟ ಮಾಡಿರುವ ರೈತನಿಗೆ 1.60 ಲಕ್ಷ ರೂ. ಹಣ ಸಂದಾಯವಾಗಿದೆ.

ಒಂದು ವರ್ಷದ ಅವಧಿಯಲ್ಲಿ ಎಂಟು ತಿಂಗಳ ಕಾಲ ಈ ಗಿಡಗಳು ಹಣ್ಣು ಕೊಡಲಿದ್ದು, ಮಿತ ನೀರು, ಕಡಿಮೆ ಖರ್ಚಿನಲ್ಲೇ ರೈತರಿಗೆ ಲಾಭದಾಯಕವಾಗಿದೆ.

ಒಣ ಭೂಮಿಯಲ್ಲಿ ಸುಲಭವಾಗಿ ಬೆಳೆಯುವ ಡ್ರ್ಯಾಗನ್ ಫ್ರೂಟ್ ಒಂದು ಎಕರೆಗೆ ನಾಟಿ ಮಾಡಲು 5.5 ಲಕ್ಷ ರೂ. ವೆಚ್ಚ ತಗುಲಿತ್ತು. ವರ್ಷದ ಎಂಟು ತಿಂಗಳು ಕಾಲ ಫಸಲು ಕೊಡುವ ಬೆಳೆ ಇದಾಗಿದ್ದು, ಜಿಲ್ಲಾ ಮಾರುಕಟ್ಟೆ ವ್ಯವಸ್ಥೆಯಿಂದ ಮುಂಬಯಿ ಸೇರಿ ದೊಡ್ಡ ನಗರಗಳಿಗೆ ಮಾರಾಟ ಮಾಡಬಹುದಾಗಿದೆ. ಬೆಳೆ ರಕ್ಷಣೆಗೆ ಹೊಲದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.ಎಚ್.ದೇವರಾಜ, ಗೊರ್ಲಕಟ್ಟೆ ರೈತತಾಲೂಕಿನಲ್ಲಿ ಡ್ರ್ಯಾಗನ್ ಪ್ರೂಟ್ ಬೆಳೆಗಾರರನ್ನು ಪ್ರೋತ್ಸಾಹಿಸಲಾಗುತ್ತಿದೆ. ಖಾತ್ರಿ ಯೋಜನೆಯಲ್ಲಿ ಒಂದು ಎಕರೆಗೆ 1.20 ಲಕ್ಷ ರೂ. ಸಹಾಯ ಧನ ನೀಡಲಾಗುತ್ತಿದೆ. ಇಲ್ಲಿನ ಮಣ್ಣಿನ ಫಲವತ್ತತೆಗೂ ಉತ್ತಮವಾಗಿ ಬೆಳೆಯುತ್ತದೆ. ತಾಲೂಕಿನಲ್ಲಿ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಡ್ರಾೃಗನ್ ಫ್ರೂಟ್ ಬೆಳೆಯಲಾಗಿದೆ.ಡಾ.ಆರ್.ವಿರೂಪಾಕ್ಷಪ್ಪ, ಸ.ನಿರ್ದೇಶಕ, ತೋಟಗಾರಿಕೆ ಇಲಾಖೆ, ಚಳ್ಳಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net