ಅತ್ಯಾಚಾರ ಆರೋಪದಿಂದ ಖುಲಾಸೆ

court
Published on

ಪಡುಬಿದ್ರಿ: ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ತಂದೆ ಉಚ್ಚಿಲ ಭಾಸ್ಕರನಗರದ ಸೈಯದ್ ಮುಸ್ತಕೀಮ್ ಅಹ್ಮದ್(39) ಎಂಬುವನನ್ನು ಹೆಚ್ಚುವರಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ದೋಷಮುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಹ್ಮದ್ ತನ್ನ ಅಪ್ರಾಪ್ತ ವಯಸ್ಸಿನ 7 ಮತ್ತು 14 ವರ್ಷದ ಹೆಣ್ಣುಮಕ್ಕಳನ್ನು ಭಾಸ್ಕರನಗರದಲ್ಲಿರುವ ಮನೆಯಲ್ಲಿ ರಾತ್ರಿ ವೇಳೆ ಮಲಗುವ ಕೋಣೆಗೆ ಬೀಗ ಹಾಕಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರವೆಸಗಿದ್ದನೆಂದು ಆತನ ನಫೀಸಾ ನುಸ್ರತ್ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ 2020 ಮಾರ್ಚ್ 20ರಂದು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಅಂದಿನ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆ ವಿಚಾರಣೆಯಲ್ಲಿ 38 ಸಾಕ್ಷಿಗಳ ಪೈಕಿ 12 ಸಾಕ್ಷಿಗಳನ್ನು ಅಭಿಯೋಜಕರ ಪರವಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು, ಮಾತ್ರವಲ್ಲದೆ 17 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು.

ಆರೋಪಿಯ ಪರವಾಗಿ ಆತನ ವಕೀಲರಿಂದ ಆರೋಪಿಯನ್ನು ಮತ್ತು ಇತರ ಎರಡು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು. ಆರೋಪಿ ಮದುವೆ ನಂತರ ಕೆಲವು ವರ್ಷ ವಿದೇಶದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ನಂತರ 2019ರಲ್ಲಿ ಊರಿಗೆ ಬಂದು ನೆಲೆಸಿದ್ದ. ಆರೋಪಿ ಹೆಂಡತಿ ನಫೀಸಾ ನುಸ್ರತಳು ಮಲ್ಲಾರಿನ ಯು.ಎ.ರಷೀದ್‌ನೊಂದಿಗೆ ಅಕ್ರಮ ಸಂಬಂಧದಲ್ಲಿ ಇದ್ದು, ನಂತರ ಈ ವಿಷಯದಲ್ಲಿ ಆರೋಪಿಗೂ ತನ್ನ ಹೆಂಡತಿಗೂ ಆಗಾಗ ಗಲಾಟೆ ನಡೆಯುತ್ತಿತ್ತು. ಪತ್ನಿ ರಷೀದ್ ನೊಂದಿಗೆ ಸಂಚು ರೂಪಿಸಿ ಆರೋಪಿವಿರುದ್ಧ ಈ ಪ್ರಕರಣ ದಾಖಲಿಸಿದ್ದಳು.

ಬಯಲಾದ ಅಕ್ರಮ ಸಂಬಂಧ

ಈ ಪ್ರಕರಣದ ನಂತರ ನುಸ್ರತ್ ಯು.ಎ. ರಷೀದ್‌ನೊಂದಿಗೆ ಗುಪ್ತವಾಗಿ ಮದುವೆಯಾಗಿದ್ದು 2021ಡಿಸೆಂಬರ್ 15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಹೆರಿಗೆಯಾದ ಆಸ್ಪತ್ರೆ ವೈದ್ಯಾಧಿಕಾರಿ ವಿಚಾರಣೆ ವೇಳೆ ಸಾಬೀತು ಪಡಿಸಿದ್ದಾರೆ.

ಮಾತ್ರವಲ್ಲದೆ ಆಸ್ಪತ್ರೆಯಲ್ಲಿ ಗಂಡನ ಹೆಸರನ್ನು ಯು.ಎ.ರಷೀದ್ ಎಂದು ನಮೂದಿಸಿದ್ದಳು. ಆರೋಪಿಯ ಪರವಾಗಿ ಸಾಕ್ಷಿಯಾಗಿ ಕಾಪು ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿ ಈ ಪ್ರಕರಣದ ತನಿಖೆ ನಡೆಯುತ್ತಿದ್ದ ಸಮಯದಲ್ಲಿ ಕಾಪು ವೃತ್ತ ನಿರೀಕ್ಷಕರಿಗೆ ತನ್ನ ಹೆಂಡತಿಯು ಯು.ಎ. ರಷೀದ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ದೂರು ನೀಡಿದ್ದನು. ಈ ಬಗ್ಗೆ ಕಾಪು ವೃತ್ತ ನಿರೀಕ್ಷಕರು ತನಿಖೆಯನ್ನು ನಡೆಸಿದ್ದರು. ತನಿಖೆಯ ಸಂದರ್ಭ ಆಕೆಯು ತಾನು ಯು.ಎ. ರಷೀದನನ್ನು ಮದುವೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ ಬಗ್ಗೆ ಕೈ ಬರಹದಲ್ಲಿ ಹೇಳಿಕೆ ಬರೆದು ಕೊಟ್ಟಿದ್ದಳು. ಈ ಹೇಳಿಕೆಯನ್ನು ಕೋರ್ಟಿನ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆಯಿಂದ ನ್ಯಾಯಾಲಯವು ಆಕೆಯು ಯು.ಎ.ರಷೀದ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿಕೊಂಡಿದ್ದು ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದು ರುಜುವಾತಾಗಿತ್ತು. ಆರೋಪಿ ಪರ ಉಡುಪಿಯ ನ್ಯಾಯವಾದಿಗಳಾದ ಪಾಂಗಳ ಹರೀಶ್ ಶೆಟ್ಟಿ ಮತ್ತು ನಮಿತಾ ಕೆ. ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net