

ಶಿರಸಿ: ನಗರವಾಸಿಗಳಿಗೆ ಬಹುದಿನಗಳಿಂದ ಸಮಸ್ಯೆಯಾಗಿ ಕಾಡುತ್ತಿದ್ದ ಫಾರಂ ನಂಬರ್- 3 ನೀತಿ ಸರಳೀಕರಣದ ಕುರಿತು ವಿಧಾನಸಭಾಧ್ಯಕ್ಷರ ಜತೆ ರ್ಚಚಿಸಲಾಗಿದೆ ಎಂದು ನಗರಸಭೆ ನೂತನ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.
ನಗರಸಭೆಯಲ್ಲಿ ಪೌರ ಕಾರ್ವಿುಕರ ಪಾದಪೂಜೆ ನೆರವೇರಿಸಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ನಗರದಲ್ಲಿ ಮೂರ್ನಾಲ್ಕು ವರ್ಷಗಳಿಂದ ಫಾರಂ ನಂಬರ್- 3, ಖಾತಾ ಬದಲಾವಣೆ, ನೂತನ ಕಟ್ಟಡ ನಿರ್ವಿುಸುವಲ್ಲಿ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಈಗಾಗಲೇ ಫಾರಂ ನಂ-3 ನೀಡಿಕೆಯಲ್ಲಿ ಸರಳೀಕರಣ ಮಾಡಲು ಸೂಚಿಸಲಾಗಿದ್ದು, ಅದರ ನೀತಿಯಲ್ಲೂ ಸರ್ಕಾರದ ಮಟ್ಟದಲ್ಲಿ ಸರಳೀಕರಣ ಮಾಡುವಂತೆ ವಿಧಾನಸಭಾಧ್ಯಕ್ಷರನ್ನು ಕೋರಲಾಗಿದೆ ಎಂದರು.
ನಗರದಲ್ಲಿ ನೀರಿನ ಸಮಸ್ಯೆಯಿದ್ದು, ಪ್ರಸ್ತುತ 38.12 ಕೋಟಿ ರೂ. ವೆಚ್ಚದಲ್ಲಿ ಹೊಸ ಪೈಪ್ಲೈನ್ ಅಳವಡಿಕೆಗೆ ಅನುದಾನ ಮಂಜೂರಾಗಿದೆ. ತಕ್ಷಣ ಈ ಕುರಿತು ಸಂಬಂಧಪಟ್ಟವರ ಜತೆ ರ್ಚಚಿಸಿ ಅನುಷ್ಠಾನ ಮಾಡಲಾಗುವುದು. ನಗರದ ಕೊಳೆಗೇರಿ ನಿವಾಸಿಗಳ ಅನುಕೂಲಕ್ಕಾಗಿ 41 ಕೋಟಿ ರೂ. ವೆಚ್ಚದಲ್ಲಿ 644 ಮನೆಗಳು ಮಂಜೂರಾಗಿದ್ದು, ಕಾಮಗಾರಿ ಆರಂಭಿಸಬೇಕಿದೆ. ದೇವಿಕೆರೆ ಅಭಿವೃದ್ಧಿ ಕಾಮಗಾರಿ ತೀರಾ ವಿಳಂಬಗತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿ ಕುರಿತು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಜತೆಗೆ ರ್ಚಚಿಸಿ ಬೇಗ ಪೂರ್ಣಗೊಳಿಸಲಾಗುವುದು ಎಂದರು.
ನಗರಸಭೆ ಆಸ್ತಿ ಎಲ್ಲೆಲ್ಲಿದೆಯೋ ಅವುಗಳನ್ನು ಗುರುತಿಸುವ ಕಾರ್ಯ ಮಾಡಲಾಗುವುದು. ಜತೆಗೆ ನೂತನ ಟೌನ್ಹಾಲ್ ನಿರ್ವಿುಸಲು ಜಾಗ ಹುಡುಕಲಾಗುತ್ತಿದೆ. ನಗರಸಭೆಯಲ್ಲಿ 100 ಪೌರ ಕಾರ್ವಿುಕರ ಅವಶ್ಯಕತೆಯಿದ್ದು ಸದ್ಯ 53 ಪೌರ ಕಾರ್ವಿುಕರಿದ್ದಾರೆ. ಮುಂಬರುವ ದಿನಗಳಲ್ಲಿ ಖಾಲಿ ಸ್ಥಾನಗಳನ್ನು ತುಂಬಲಾಗುವುದು. ಜತೆಗೆ ನಗರಸಭೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೂ ಕ್ರಮ ವಹಿಸಲಾಗುವುದು ಎಂದರು.
ಬಿಡಾಡಿ ದನಗಳ ಹಾವಳಿ ನಿಯಂತ್ರಿಸಲು, ರೇಡಿಯಂ ಪಟ್ಟಿ ಹಚ್ಚುವ ಜತೆಗೆ ದನದ ಮಾಲೀಕರಿಗೆ ಒಂದು ವಾರ ಸಮಯ ನೀಡಲಾಗುವುದು. ಅವರು ತೆಗೆದುಕೊಂಡು ಹೋಗದಿದ್ದರೆ ಗೋ ಶಾಲೆಗಳಿಗೆ ನೀಡಲು ಕ್ರಮ ವಹಿಸಲಾಗುವುದು ಎಂದರು. ಈ ವೇಳೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.