ಕೈಗಾರಿಕಾಭಿವೃದ್ಧಿಗೆ ಕೃಷಿ ಜಮೀನಿನ ಸ್ವಾಧೀನ ದೊಡ್ಡ ಹಗರಣ, ಸರ್ಕಾರ ರೈತರ ಹಿತ ಕಾಪಾಡಲಿ

IMG-20250623-WA0031.jpg
Published on

ಚಿಕ್ಕಬಳ್ಳಾಪುರ: ಕೈಗಾರಿಕೆ ಅಭಿವೃದ್ಧಿಗೆ ರೈತರ ಕೃಷಿ ಜಮೀನಿನ ಸ್ವಾಧೀನ ದೊಡ್ಡ ಹಗರಣ ಎಂದು ಸಂಸದ ಡಾ. ಕೆ.ಸುಧಾಕರ್ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವನಹಳ್ಳಿ ಚಲೋ ಹೋರಾಟ ಕೈಗೊಂಡಿರುವ ರೈತರನ್ನು ಬೆಂಬಲಿಸಲಿದ್ದು, ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಮೊದಲು ಕೈಗಾರಿಕೆ ಸ್ಥಾಪಿಸಲು ಒತ್ತು ನೀಡಲಿ. ಅನ್ನದಾತರು ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಾಗೆಯೇ ಸ್ಥಾಪನೆಯ ಉದ್ದಿಮೆಗಳು, ಉದ್ಯೋಗಾವಕಾಶಗಳ ಬಗೆಗಿನ ಮಾಹಿತಿ ಖಚಿತಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಗೌರಿಬಿದನೂರು ಹಾಗೂ ಚಿಂತಾಮಣಿಯಲ್ಲಿ ಎರಡು ಹಂತದ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇಲ್ಲಿ ಬಹುತೇಕ ಕಡೆ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಮಂಚೇನಹಳ್ಳಿಯಲ್ಲಿ ಎರಡು ಸಾವಿರ ಎಕರೆ ಜಾಗ ಗುರುತಿಸಲಾಗಿದೆ. ಆದರೂ ಶಿಡ್ಲಘಟ್ಟದಲ್ಲಿ ಹೊಸದಾಗಿ ಜಮೀನು ವಶಪಡಿಸಿಕೊಳ್ಳಲಾಗುತ್ತಿದೆ. ರೈತರ ವಿರೋಧದ ನಡುವೆಯೂ ಇದೆಲ್ಲವೂ ಅಗತ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.

* ಸಚಿವರು ಸಮಸ್ಯೆ ಬಗೆಹರಿಸಲಿ
ರಾಜ್ಯದಲ್ಲಿ ವಸತಿ ಸೌಲಭ್ಯ, ಖಾತೆ, ವಾಣಿಜ್ಯ ಪರವಾನಗಿ, ಗಣಿಗಾರಿಕೆ ನವೀಕರಣ ಸೇರಿ ಪ್ರತಿಯೊಂದು ಕೆಲಸಗಳಿಗೂ ಹಣ ಕೊಡಬೇಕು. ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಕೃಷಿ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿ, ಹಣ ಸಮೇತ ಹಿರಿಯ ಅಧಿಕಾರಿಯನ್ನು ವಶಕ್ಕೆ ಪಡೆದಿರುವುದು ಒಂದು ನಿದರ್ಶನ. ಇದರ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರಾಮಾಣಿಕರು ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆಕಾಶದಲ್ಲಿಯೇ ಓಡಾಡುತ್ತಿದ್ದಾರೆ. ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ವರ್ತಿಸುತ್ತಿದ್ದು, ಈಗಲಾದರೂ ಜಿಲ್ಲೆಯ ಕಡೆಗೆ ಗಮನಹರಿಸಿ, ಸುಮ್ಮನೆ ಯಾವುದೋ ಚಾಳಿಯಿಂದ ಟೀಕಿಸುತ್ತಿಲ್ಲ. ವಾಸ್ತವಾಂಶವನ್ನು ತಿಳಿದುಕೊಂಡು ಸಮಸ್ಯೆಗಳನ್ನು ಬಗೆಹರಿಸಲಿ, ಇದರಲ್ಲಿ ರಾಜಕೀಯ ಬೇಡ ಎಂದು ಸಂಸದ ಡಾ.ಕೆ. ಸುಧಾಕರ್ ಸಲಹೆ ನೀಡಿದರು.  

*ಲೋಕಾಯುಕ್ತ ಕಣ್ಣಿಡಲಿ
ರಾಜ್ಯದ ತುಲಕ್ ಸರ್ಕಾರದ ರ್ನಿಣಯಗಳು ಅಪಹಾಸ್ಯ, ಟೀಕೆಗೆ ಗುರಿಯಾಗುತ್ತಿವೆ. ಬಡ ಜನರಿಗೆ ತೊಂದರೆಯಾಗುತ್ತಿದೆ. ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಲೋಕಾಯುಕ್ತ ಕಣ್ಣಿಟ್ಟು ತನಿಖೆ ಕೈಗೊಳ್ಳಬೇಕು. ಭ್ರಷ್ಟರನ್ನು ಜೈಲಿಗೆ ಕಳುಹಿಸಬೇಕು ಎಂದು ಸಂಸದ ಡಾ.ಕೆ. ಸುಧಾಕರ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net