ವೈವಿಧ್ಯಮಯ ಕೌಶಲ ಸಂಪಾದಿಸಲಿ

IMG20241129195341.jpg
Published on

ಬೆಳಗಾವಿ: ಆಧುನಿಕ ಯುಗದಲ್ಲಿ ಪ್ರತಿಭೆ ಮತ್ತು ಕೌಶಲಗಳ ಆಧಾರದ ಮೇಲೆ ಉದ್ಯೋಗಾವಕಾಶಗಳು ಸಿಗುತ್ತವೆ. ಅನ್ವಯಿಕತೆಯ ಜ್ಞಾನವು ಒಂದು ಕೌಶಲವಾಗಿದೆ. ವಿದ್ಯಾರ್ಥಿಗಳು ವೈವಿಧ್ಯಮಯ ಕೌಶಲ ಸಂಪಾದಿಸಬೇಕು ಎಂದು ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಗಣಕ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಚನ್ನಪ್ಪ ಅಕ್ಕಿ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ ಶಾಲಾ ವಲಯ ವಿಜ್ಞಾನ ವಸ್ತು ಪ್ರದರ್ಶನ ಸೈನ್ಸಿಯಾ ವೆನಾರಿ 5.0 ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಮತ್ತು ವರ್ತನೆಯ ಮೂಲಕ ವಿಶ್ವಾಸ ಗಳಿಸಬೇಕು. ಮಾನವನ ವರ್ತನೆಗಳು ಅವಕಾಶಗಳ ಬಾಗಿಲನ್ನು ತೆರೆಸುತ್ತವೆ. ಸಂವಹನ ಕೌಶಲವು ಪ್ರಧಾನವಾಗಿ ಅವಶ್ಯಕವಿರುತ್ತದೆ. ಮಾತು ಮತ್ತು ಮನ ಒಂದಾಗಿದ್ದು, ಕೃತಿ ಒಳ್ಳೆಯದಾಗಿದ್ದರೆ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಬಹುದಾಗಿದೆ ಎಂದರು.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಸದುದ್ದೇಶದಿಂದ ಇಂತಹ ಕಾರ‌್ಯಕ್ರಮ ಆಯೋಜಿಸಲಾಗಿದೆ. ಪ್ರಪಂಚದಲ್ಲಿ ಅತೀ ಹೆಚ್ಚು ಯುವಕರನ್ನು ಹೊಂದಿರುವ ಭಾರತದ ಕಡೆಗೆ ವಿವಿಧ ರಾಷ್ಟ್ರಗಳು ನೋಡುತ್ತಿವೆ. ವೈಜ್ಞಾನಿಕತೆಗೆ ಇಂದು ಹೆಚ್ಚಿನ ಮಹತ್ವ ಬರುತ್ತಿದೆ. ಯುವ ವಿಜ್ಞಾಗಳಿಗೆ ಭಾರತ ಸರ್ಕಾರ ಪ್ರಾಶಸ್ತ್ಯ ನೀಡುತ್ತಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ. ಜ್ಯೋತಿ ಎಸ್ ಕವಳೇಕರ ಮಾತನಾಡಿ, ನಿಸರ್ಗದ ಸವಾಲುಗಳನ್ನು ಎದುರಿಸುತ್ತಾ ಸ್ಪರ್ಧೆ ಮಾಡಬೇಕು. ಇಂತಹ ಅರ್ಥಪೂರ್ಣವಾದ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ವಿಶ್ವನಾಥ ಕಾಮಗೋಳ, ಉಪ ಪ್ರಾಚಾರ್ಯ ಡಾ. ಸಂದೀಪ ಜವಳಿ, ಸರೋಜಾ ಗಾಡಿ, ಆರುಶಿ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net