ಸುರಕ್ಷಿತವಾಗಿ ವಾಹನ ಚಲಾಯಿಸಿ

chn may 13 rsathe surakshathe (1)
Published on

ಚನ್ನಗಿರಿ: ವಾಹನವನ್ನು ಚಲಾಯಿಸುವಾಗ ಒತ್ತಡವನ್ನು ಮರೆತು ಸುರಕ್ಷಿತವಾಗಿ ಚಾಲನೆ ಮಾಡಬೇಕು. ಕುಟುಂಬದವರು ನಿಮ್ಮನ್ನು ಆಶ್ರಯಿಸಿರುತ್ತಾರೆ ಎಂದು ಎಸಿಪಿ ಸ್ಯಾಮ್ ವರ್ಗೀಸ್ ತಿಳಿಸಿದರು.

ಇಲ್ಲಿನ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಹೆಲ್ಮೆಟ್ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಯುವಕರು ಪಾಲಕರನ್ನು ಒತ್ತಾಯಿಸಿ ದ್ವಿಚಕ್ರ ವಾಹನವನ್ನು ಖರೀದಿಸಿ, ವಿವಿಧ ಭಂಗಿಯಲ್ಲಿ ಓಡಿಸಲು ಹೋಗಿ ಅಪಘಾತ ಸಂಭವಿಸಿ ಚಿಕ್ಕ ವಯಸ್ಸಿನಲ್ಲೆ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವರನ್ನು ನಂಬಿರುವ ಜೀವ ಬೀದಿಗೆ ಅಥವಾ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ ಎಂದರು.

ಪ್ರಸ್ತುತ ಎಲ್ಲರಿಗೂ ವಾಹನಗಳ ಅವಶ್ಯಕತೆಯಿದ್ದು, ಇದನ್ನು ಚಲಾಯಿಸುವಾಗ ಸಾಮಾನ್ಯ ಕಾನೂನು ನಿಯಮಗಳನ್ನು ಪಾಲನೆ ಮಾಡಿ. ಜಾಗರೂಕತೆಯಿಂದ ಚಲಾಯಿಸಿ. ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ ತಪ್ಪದೇ ಹೆಲ್ಮೆಟ್ ಧರಿಸಿ ಎಂದು ಸಲಹೆ ನೀಡಿದರು.

ಸಮೀಕ್ಷೆ ಪ್ರಕಾರ ಪ್ರತಿ ಗಂಟೆಗೆ ಅಪಘಾತದಲ್ಲಿ 20 ಜನರ ಸಾವಾಗುತ್ತಿದೆ. ಅದರಲ್ಲಿ ಬೈಕ್ ಅಪಘಾತದಲ್ಲಿ 10 ಜನ ಸಾಯುತ್ತಿದ್ದಾರೆ. ಪೊಲೀಸ್ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ರಸ್ತೆ ಕಾನೂನು ಜತೆಗೆ ಕುಟುಂಬವನ್ನು ನೆನಪಿಸಿಕೊಂಡು ವಾಹನಗಳನ್ನು ಚಾಲನೆ ಮಾಡಿ. ಅತಿ ವೇಗ ಅಪಘಾತಕ್ಕೆ ಕಾರಣವಾಗುತ್ತದೆ ಎಂದರು.

ಪ್ರಾಚಾರ್ಯ ಅಮೃತೇಶ್ವರ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಮತ್ತು ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸುವುದರಿಂದ ಜೀವ ರಕ್ಷಣೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ. ನಿರ್ಲಕ್ಷ್ಯ ಮಾಡಿದವರ ಸ್ಥಿತಿ ಏನಾಗಿದೆ ಎನ್ನುವುದನ್ನು ಪ್ರತಿನಿತ್ಯ ನಾವು ನೋಡುತ್ತಿದ್ದೇವೆ. ಇತ್ತೀಚಿನ ದಿನದಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿವೆ ಎಂದು ಹೇಳಿದರು.

ಸಿಪಿಐ ಕೆ.ಎನ್. ರವೀಶ್, ಪಿಎಸ್​ಐ ಸುರೇಶ್, ಗುರುಶಾಂತಯ್ಯ, ಜಯಪ್ಪನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net