ಸಾಧಕರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ

27-11-Shiva-2
ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಕಲಾ ಸಂಕುಲ ಸಂಸ್ಥೆಯಿಂದ ಭಾನುವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯಗುರು ರಾಮಣ್ಣ ಹವಳೆ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಕಿರುತೆರೆ ನಟಿ ಸುಕೃತ ನಾಗ್, ನಿರ್ಮಾಪಕಿ ಮಾಲತಿ ಗೌಡ, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶ್ರೀದೇವಿ ನಾಯಕ, ಸಂಸ್ಥೆ ಅಧ್ಯಕ್ಷೆ ರೇಖಾ ಬಡಿಗೇರ, ಕಾರ್ಯದರ್ಶಿ ಮಾರುತಿ ಬಡಿಗೇರ ಇದ್ದರು.
Published on

ರಾಯಚೂರು: ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸಿದಾಗ ಅವರಿಗೆ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಲು ಪ್ರೇರಣೆ ನೀಡಿದಂತಾಗಲಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯಗುರು ರಾಮಣ್ಣ ಹವಳೆ ತಿಳಿಸಿದರು.
ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಕಲಾ ಸಂಕುಲ ಸಂಸ್ಥೆಯಿಂದ ಭಾನುವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಮತ್ತು ದಿ ಸೂಟ್ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಕಷ್ಟು ಜನರು ಯಾವುದೇ ಸ್ವಾರ್ಥವಿಲ್ಲದೆ ಹಲವಾರು ಕ್ಷೇತ್ರಗಳಲ್ಲಿ ಆ ಕ್ಷೇತ್ರದ ಬೆಳವಣಿಗೆಗಾಗಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಎಲ್ಲರೂ ಮಾಡಬೇಕು. ಎಲ್ಲರೂ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಿರುತೆರೆ ನಟಿ ಸುಕೃತ ನಾಗ್ ಮಾತನಾಡಿ, ಉತ್ತಮ ಕರ್ನಾಟಕದ ಜನರು ಹೃದಯವಂತರಾಗಿದ್ದು, ಕಲಾವಿದರು, ಸಾಹಿತಿಗಳಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಇಲ್ಲಿನ ಜನರ ಮಾತು ಒರಟಾಗಿದ್ದರೂ ಮನಸ್ಸು ಮಾತ್ರ ಮೃದುವಾಗಿದೆ. ಜನತೆಗೆ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುತ್ತಾರೆ ಎಂದರು.
ಬೆಂಗಳೂರಿನ ಸಾಂತ್ವನ ೌಂಡೇಷನ್ ಅಧ್ಯಕ್ಷೆ ಡಾ.ಪವಿತ್ರಾ ರೆಡ್ಡಿ ಮಾತನಾಡಿ, ಪ್ರಶಸ್ತಿಗಳು ಪ್ರತಿಯೊಬ್ಬ ಮನುಷ್ಯನ ಜೀವನದ ಯಶಸ್ಸಿನ ಮೆಟ್ಟಿಲುಗಳಾಗಿವೆ. ನಮ್ಮ ಕೆಲಸವನ್ನು ಇತರರು ಗುರುತಿಸಿದಾಗ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಯಾದಗಿರಿ ಚಿತ್ರಕಲಾವಿದ ಮೇಘನಾಥ ಅಬ್ರಹಾಂರಿಂದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಜರುಗಿತು. ದಿ ಸೂಟ್ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆಗೊಳಿಸಲಾಯಿತು.
ಸಂಸ್ಥೆ ಅಧ್ಯಕ್ಷೆ ರೇಖಾ ಬಡಿಗೇರಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ನಿರ್ಮಾಪಕಿ ಮಾಲತಿ ಗೌಡ, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶ್ರೀದೇವಿ ನಾಯಕ, ಸಂಸ್ಥೆ ಕಾರ್ಯದರ್ಶಿ ಮಾರುತಿ ಬಡಿಗೇರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net