

ಮಂಗಳೂರು: ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಆ್ಯಸಿಡ್ ದಾಳಿಯ ಮೂವರು ಸಂತ್ರಸ್ತ ವಿದ್ಯಾರ್ಥಿನಿಯರಿಗೆ ತಕ್ಷಣ ತಲಾ ನಾಲ್ಕು ಲಕ್ಷ ರೂ. ಪರಿಹಾರ ಒದಗಿಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ವಿದ್ಯಾರ್ಥಿನಿಯರನ್ನು ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಸಾಂತ್ವನ ಹೇಳಿದ ಡಾ.ನಾಗಲಕ್ಷ್ಮಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ವಿದ್ಯಾರ್ಥಿನಿಯರು ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಮಕ್ಕಳಲ್ಲಿ ಮನೋಸ್ಥೈರ್ಯ ಇದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿಗೆ ಶೇ.20ರಷ್ಟು, ಇನ್ನಿಬ್ಬರು ಶೇ. 12ರಷ್ಟು ಹಾಗೂ ಶೇ. 10ಕ್ಕಿಂತ ಕಡಿಮೆ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರಿಗೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯ ಇರುವುದಾಗಿ ವೈದ್ಯರು ತಿಳಿಸಿದ್ದು, ಸರ್ಕಾರದಿಂದ ಈ ಶಸ್ತ್ರ ಚಿಕಿತ್ಸೆಗೆ 20 ಲಕ್ಷ ರೂ. ವೈದ್ಯಕೀಯ ಪರಿಹಾರ ದೊರೆಯಲಿದೆ ಎಂದು ಅವರು ಹೇಳಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅವರಿಗೆ ಬಾಕಿ ಉಳಿದ ಪರೀಕ್ಷೆಗಳನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಶಿಕ್ಷಣ ಸಚಿವರು ಸೇರಿದಂತೆ ಸಂಬಂಧಪಟ್ಟವರ ಜತೆ ಮಾತನಾಡುವುದಾಗಿ ಅವರು ಹೇಳಿದರು.
ಆ್ಯಸಿಡ್ ಸಂತ್ರಸ್ತರಿಗೆ ಸ್ವ ಉದ್ಯೋಗಕ್ಕೆ 5 ಲಕ್ಷ ರೂ. ನೆರವು
ಆ್ಯಸಿಡ್ ದಾಳಿಗೆ ಒಳಗಾಗುವ ಸಂತ್ರಸ್ತರು ಮುಂದೆ ಸ್ವ ಉದ್ಯೋಗ ಕೈಗೊಳ್ಳಲು ಮುಂದಾಗುವುದಿದ್ದರೆ ಅವರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ.ಗಳ ನೆರವನ್ನೂ ಒದಗಿಸಲಾಗುತ್ತಿದೆ. ಕಡಬದಲ್ಲಿ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತ ವಿದ್ಯಾರ್ಥಿನಿಯರು ಆಯುಷ್ಮಾನ್ ಆರೋಗ್ಯ ಕಾರ್ಡ್‌ಗೆ ಒಳಪಡದ ಕಾರಣ, ಆ ವಿದ್ಯಾರ್ಥಿನಿಯರ ಕುಟುಂಬಗಳೂ ಬಡವರಾಗಿರುವ ಕಾರಣ ಎಜೆ ಆಸ್ಪತ್ರೆಯವರು ಅವರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ ಎಂದು ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.
ಮಕ್ಕಳು ದಾಳಿಯಿಂದ ಮಾನಸಿಕವಾಗಿ ತುಮುಲಕ್ಕೆ ತುತ್ತಾಗಿರುವ ಜತೆಯಲ್ಲೇ ತಮ್ಮ ಭವಿಷ್ಯದ ಬಗ್ಗೆಯೂ ಆತಂಕಕ್ಕೀಡಾಗಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯೊಬ್ಬರು ಮತ್ತೆ ಕನ್ನಡ ಪರೀಕ್ಷೆ ಬರೆಯಬೇಕಾ? ಎಂದು ಪ್ರಶ್ನಿಸಿದ್ದಾರೆ. ನಾವು ಸಾಂತ್ವನ ಹೇಳಿದ್ದೇವೆ. ಬಾಕಿ ಉಳಿದ ಪರೀಕ್ಷೆಗೂ ಸೂಕ್ತ ವ್ಯವಸ್ಥೆಯ ಭರವಸೆ ನೀಡಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಹೇಳಿದ್ದಾರೆ.