

ಕಡಬ ತಾಲೂಕಿನ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾ.4 ರಂದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು
ಸಿದ್ದತೆಯಲ್ಲಿದ್ದಾಗ ದುಷ್ಕರ್ಮಿಯಿಂದ ಆಸಿಡ್ ದಾಳಿಗೊಳಗಾಗಿ ಗಂಭೀರ ಗಾಯಗೊಂಡ ವಿದ್ಯಾರ್ಥಿನಿ ಗುರುವಾರ ಮತ್ತು ಶುಕ್ರವಾರ ಮಂಗಳೂರಿನ ಪದುವಾ ಪಿಯು ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದಾಳೆ. ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ತನ್ನ ತಾಯಿಯೊಂದಿಗೆ ಆಂಬುಲೆನ್ಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ವಾಪಸ್ಸು ಆಸ್ಪತ್ರೆಗೆ ಮರಳಿದ್ದಾಳೆ.
ಮಾ.4ರಂದು ಕಡಬ ಸರ್ಕಾರಿ ಕಾಲೇಜಿಗೆ ಕೇರಳ ಮೂಲದ ಅಬಿನ್ ಎಂಬಾತ ಆಗಮಿಸಿ ಆಸಿಡ್ ಎರಚಿದ್ದ, ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಸುಟ್ಟ ಗಾಯವಾಗಿತ್ತು. ಈ ಪೈಕಿ ಇಬ್ಬರು ವಿದ್ಯಾರ್ಥಿನಿಯರಿಗೆ ಸುಟ್ಟ ಗಾಯದ ಪ್ರಮಾಣ ಕಡಿಮೆಯಾಗಿತ್ತು. ಇವರಿಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೋರ್ವಳಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ
ಈಕೆ ಪದುವಾ ಪಿಯು ಕಾಲೇಜಿನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾಳೆ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿಯೇ ಸಿಇಟಿ ಪರೀಕ್ಷೆಗೆ ಸಿದ್ದತೆ ನಡೆಸಿದ್ದಳು. ಚಿಕಿತ್ಸೆ ವೇಳೆ ದೂರ ಪ್ರಯಾಣ ಮಾಡದಂತೆ ಬಾಲಕಿಗೆ ಚಿಕಿತ್ಸೆ ನೀಡಿದ ವೈದ್ಯರು ಪದವಿ ಪೂರ್ವ ವಿಭಾಗದ ಉಪನಿರ್ದೇಶಕ ಸಿ ಡಿ ಜಯಣ್ಣ ಅವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರ ಗಮನಕ್ಕೆ ತರಲಾಗಿತ್ತು. ಅವರ ಮಾರ್ಗದರ್ಶನದಂತೆ ಆಸ್ಪತ್ರೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಪದುವಾ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಯಿತು. ಈ ಸಂತ್ರಸ್ಥೆ ಬಾಲಕಿ ಮತ್ತು ಅಸಿಡ್ ದಾಳಿಗೊಳಗಾದ ಇಬ್ಬರು ಬಾಲಕಿಯರು ಎ. 29 ರಂದು ಪ್ರಾರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆಯ ಎರಡನೇ ಪ್ರಯತ್ನಕ್ಕೆ ಅರ್ಜಿ ಹಾಕಿದ್ದು ,ಮೂವರಿಗೆ ಪರೀಕ್ಷೆ ಬರೆಯಲು ಅನೂಕೂಲವಾಗುವ ಎಲ್ಲ ಸಿದ್ದತೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಕಲ್ಪಿಸಿದೆ.
..................................