ಕೊಡಗಿನ ವೇಗಕ್ಕೆ ಎಸಿಐಸಿ ಚಿಮ್ಮುಹಲಗೆ

22MDK03
Published on

ಮಡಿಕೇರಿ:

ಪ್ರಾಕೃತಿಕ ಸಂಪತ್ತು, ಕೃಷಿ, ತೋಟಗಾರಿಗೆ ಪರಿಣಾಮಕಾರಿಯಾಗಿ ಬಳಸಿಕೊಂಡು ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ವೇಗ ಕೊಡಲು ಕೊಡಗಿಗೆ ಒಂದು ಅಟಲ್ ಕಮ್ಯುನಿಟಿ ಇನೋವೇಷನ್ ಸೆಂಟರ್ (ಎಸಿಐಸಿ) ಅಗತ್ಯತೆ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕೃಷಿಕರ ಆರ್ಥಿಕ ಸಬಲೀಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಮಹಾತ್ವಾಕಾಂಕ್ಷಿ ಯೋಜನೆ ಇದ್ದಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಟಾರ್ಟಪ್ ಆರಂಭಿಸಲು ಆಸಕ್ತರಿಗೆ ವಯೋಬೇಧವಿಲ್ಲದೆ ಎಸಿಐಸಿ ಸಹಾಯ ಮಾಡುತ್ತದೆ. ಈಗಾಗಲೇ ಅನುಷ್ಠಾನದಲ್ಲಿ ಇರುವ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಗಿಂತಲೂ ಎಸಿಐಸಿ ವಿಶಾಲ ವ್ಯಾಪ್ತಿ ಹೊಂದಿದೆ.

ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಜಿಲ್ಲೆಯಲ್ಲೂ ಅನುಷ್ಠಾನದಲ್ಲಿ ಇದೆ. ಸಣ್ಣ ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸುವುದು, ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು ಉದ್ದಿಮೆದಾರರು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸಹಕಾರಿ ಸಂಸ್ಥೆಗಳು ಸೇರಿದಂತೆ ಹಲವು ಬಗೆಯ ಉತ್ಪಾದಕರಿಗೆ ಯೋಜನೆ ಅಡಿಯಲ್ಲಿ ಉತ್ತೇಜನ ನೀಡುವ ಮೂಲಕ ಆರ್ಥಿಕ ಸಬಲೀಕರಣದ ಚಿಂತನೆಯನ್ನು ಹೊಂದಿರುವ ಯೋಜನೆ ಇದಾಗಿದೆ.

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ಆರಂಭಿಸಿ ಈ ಯೋಜನೆಗಾಗಿ ಕೊಡಗಿನಲ್ಲಿ ಕಾಫಿಯನ್ನು ಗುರುತಿಸಿದ ಸಂದರ್ಭ ಕಾಫಿ ಮಾರುಕಟ್ಟೆ ವಿಸ್ತರಣೆಯ ಹೊಸ ಸಾಧ್ಯತೆಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿಸಿತ್ತು. ಕಾಫಿ ಬೇಡಿಕೆ ಹೆಚ್ಚುವುದರೊಂದಿಗೆ ಬೆಳೆಗಾರರಿಗೂ ಅನುಕೂಲವಾಗುವ ಬಗ್ಗೆಯೂ ಆಶಾಭಾವನೆ ಕಂಡು ಬಂದಿತ್ತು. ಆದರೆ ಈ ಯೋಜನೆಗೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಕ್ರಿಯೆ ಕಂಡುಬಂದಿರಲಿಲ್ಲ.

ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಕಾಫಿಯಲ್ಲಿ ಶೇ.೭೦ರಷ್ಟು ಕರ್ನಾಟಕದಲ್ಲೇ ಬೆಳೆಯಲಾಗುತ್ತದೆ. ಇದರಲ್ಲಿ ಶೇ.೫೦ರಷ್ಟು ಪಾಲು ಕೊಡಗು ಹೊಂದಿದೆ. ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ. ೩೫ರಷ್ಟು ಕಾಫಿ ಪುಟ್ಟ ಜಿಲ್ಲೆ ಕೊಡಗಿನಿಂದ ಬರುತ್ತದೆ. ವಾರ್ಷಿಕವಾಗಿ ಇಲ್ಲಿ ಸುಮಾರು ೧ ಲಕ್ಷದ ೧೧ ಮೆಟ್ರಿಕ್ ಟನ್‌ಗಳಷ್ಟು ಕಾಫಿ ಬೆಳೆಯಲಾಗುತ್ತದೆ. ೧೮೫೪ಕ್ಕೂ ಮೊದಲಿನಿಂದಲೇ ಜಿಲ್ಲೆಯಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ಇಲ್ಲಿಯ ಕಾಫಿ ತೋಟಗಳಿಗೆ ದೊಡ್ಡ ಇತಿಹಾಸವಿದೆ. ಹಾಗಾಗಿ ಸಹಜವಾಗಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ಕೊಡಗಿನಲ್ಲಿ ಕಾಫಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಹೆಚ್ಚುತ್ತಿರುವ ತೋಟದ ನಿರ್ವಹಣಾ ವೆಚ್ಚ, ಕಾರ್ಮಿಕರ ಕೊರತೆ, ಅತಿವಷ್ಟಿ, ಅನಾವಷ್ಟಿ, ಬೆಲೆ ಕುಸಿತ.. ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಳೆಗಾರ ಸಂಕಷ್ಟದಲ್ಲಿ ಇದ್ದು ಬಹುತೇಕರು ಕಾಫಿ ತೋಟದ ಸಹವಾಸವೇ ಬೇಡ ಎಂದು ದೂರ ಸರಿಯುವ ವಾತಾವರಣ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ಕಾಫಿಯನ್ನು ಆಯ್ಕೆ ಮಾಡಿಕೊಂಡಿದ್ದರೂ ಜಿಲ್ಲೆಗೆ ದೊಡ್ಡ ಮಟ್ಟಿಗೆ ಪ್ರಯೋಜನ ಆಗಲಿಲ್ಲ.

ಕಾಫಿಯ ಸೀಮಿತ ಮಾರುಕಟ್ಟೆ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಬಗ್ಗೆ ಸಂಬಂಧಿಸಿದ ಇಲಾಖೆಗಳಿಂದ ಪ್ರಚಾರದ ಕೊರತೆ, ಹಣಕಾಸು ಸಂಸ್ಥೆಗಳ ನಿರಾಸಕ್ತಿ..ಹೀಗೆ ಈ ಯೋಜನೆ ವಿಫಲವಾಗಲು ಹಲವು ಕಾರಣಗಳನ್ನು ಪಟ್ಟಿ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಟಲ್ ಕಮ್ಯುನಿಟಿ ಇನೋವೇಷನ್ ಸೆಂಟರ್ (ಎಸಿಐಸಿ) ಆಗತ್ಯತೆ ಬಗ್ಗೆ ಅಭಿವೃದ್ದಿಪರ ಇರುವವರಲ್ಲಿ ಹೆಚ್ಚಿನ ಒಲವು ಕಂಡು ಬರುತ್ತಿದೆ. ಅಟಲ್ ಇನ್ನೋವೇಷನ್ ಮಿಷನ್‌ನ ಒಂದು ಭಾಗವಾಗಿ ಅಟಲ್ ಕಮ್ಯುನಿಟಿ ಇನೋವೇಷನ್ ಸೆಂಟರ್ (ಎಸಿಐಸಿ) ಕಾರ್ಯ ನಿರ್ವಹಿಸುತ್ತಿದೆ. ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಆರಂಭಿಸಿದ ಯೋಜನೆ ಇದಾಗಿದೆ. ಶಾಲೆಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಎಂಎಸ್‌ಎಂಇ ವಲಯದಲ್ಲಿ ಉದ್ಯಮಶೀಲತೆಯ ವಾತಾವರಣ ರೂಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ.

೨ ಮತ್ತು ೩ನೇ ಶ್ರೇಣಿ ನಗರಗಳು, ವೈಶಿಷ್ಟ್ಯಪೂರ್ಣ ಜಿಲ್ಲೆಗಳು, ಬುಡಕಟ್ಟು ಜನರಿರುವ ಪ್ರದೇಶ, ಗುಡ್ಡಗಾಡು ಮತ್ತು ಕರಾವಳಿ ಪ್ರದೇಶಗಳನ್ನು ಒಳಗೊಂಡಂತೆ ಅಗತ್ಯ ಪ್ರದೇಶಗಳಲ್ಲಿ ತಾಂತ್ರಿಕ ಆವಿಷ್ಕಾರದ ಪ್ರಯೋಜನಗಳನ್ನು ತಲುಪಿಸಲು ಅಟಲ್ ಕಮ್ಯುನಿಟಿ ಇನೋವೇಷನ್ ಸೆಂಟರ್ (ಎಸಿಐಸಿ) ಆರಂಭಿಸಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ೨.೫ ಕೋಟಿ ರೂ. ತನಕ ಅನುದಾನ ಕೊಡಲಾಗುತ್ತದೆ. ಜಲಾನಯನ, ಕೃಷಿ, ತೋಟಗಾರಿಕೆಗಳಿಗೆ ಸಂಬಂಧಿಸಿದಂತೆ ರೈತರಿಗೆ ಸಹಾಯ ಮಾಡಲು, ಸ್ಟಾರ್ಟಪ್‌ಗಳು, ಕೈಗಾರಿಕೆಗಳನ್ನು ಆರಂಭಿಸಲು ಈ ಕೇಂದ್ರಗಳಲ್ಲಿನ ತಾಂತ್ರಿಕ ಸಹಕಾರ ಸೂಕ್ತ ಒತ್ತಾಸೆಯಾಗಿ ನಿಲ್ಲುತ್ತದೆ. ಸ್ಟಾರ್ಟ್‌ಅಪ್‌ಗಳು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲು ಅಟಲ್ ಕಮ್ಯುನಿಟಿ ಇನ್ನೋವೇಶನ್ ಸೆಂಟರ್‌ನ ಪ್ರಯೋಗಾಲಯ ಸೌಲಭ್ಯವೂ ಬೆಂಬಲ ನೀಡುತ್ತದೆ.

ಮಲೆನಾಡಿನ ಮಡಿಲಲ್ಲಿ ಇರುವ ಕೊಡಗು ಬೆಟ್ಟ ಗುಡ್ಡಗಳಿಂದ ಕೂಡಿದ್ದು, ಪ್ರಾಕೃತಿ ಸಂಪತ್ತೂ ಹೇರಳವಾಗಿದೆ. ಜಲಾನಯನ, ಕೃಷಿ, ತೋಟಗಾರಿಕೆಗಳ ಮೂಲಕವು ಸಂಪದ್ಬರಿತವಾಗಿದೆ. ಇಲ್ಲಿ ಕೃಷಿ ಅಥವಾ ತೋಟಗಾರಿಕೆ ಇನ್ನು ಕೂಡ ಬಹುತೇಕ ಸಾಂಪ್ರದಾಯಿಕ ಪದ್ಧತಿಯಲ್ಲೇ ನಡೆಯುತ್ತಿದೆ. ಮೂಲ ಉತ್ಪನ್ನಗಳಿಗಿಂತ ಹೆಚ್ಚು ಲಾಭದಾಯಕವಾಗಬಲ್ಲ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಉಪ ಉತ್ಪನ್ನಗಳ ತಯಾರಿಕೆ ಬಗ್ಗೆ ಹೆಚ್ಚಿನವರು ಆಸಕ್ತಿ ತೋರಿಸುತ್ತಿಲ್ಲ. ಕೃಷಿ ಅಥವಾ ತೋಟಗಾರಿಕೆ ಅವಲಂಬಿಸಿ ಪರಿಸರಕ್ಕೆ ಪೂರಕ ಕೈಗಾರಿಕೆಗಳನ್ನು ಆರಂಭಿಸಲು ಕೂಡ ಇಲ್ಲಿ ಬೇಕಾದಷ್ಟು ಅವಕಾಶಗಳಿವೆ. ಸಾಮಾನ್ಯವಾಗಿ ಪ್ರತಿಯೊಂದು ಕಾಫಿ ತೊಟದಲ್ಲೂ ವಿವಿಧ ವಿಸ್ತೀರ್ಣದ ಕೊಳ, ಕೆರೆಗಳಿವೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಮೀನು ಸಾಕಾಣಿಕೆಯೂ ಕಂಡುಬರುತ್ತಿದ್ದು, ಇದನ್ನು ಉನ್ನತೀಕರಿಸಲೂ ಅವಕಾಶವಿದೆ.

ಅಟಲ್ ಕಮ್ಯುನಿಟಿ ಇನೋವೇಷನ್ ಸೆಂಟರ್ (ಎಸಿಐಸಿ) ಕೊಡಗಿಗೆ ಬಂದರೆ ಹೊಸ ಸಾಧ್ಯತೆಗಳಿಗೆ ಅವಕಾಶದ ಬಾಗಿಲು ತೆರೆದಂತಾಗುತ್ತದೆ ಎನ್ನುವುದು ಸ್ಥಳೀಯರ ನಿರೀಕ್ಷೆ. ಇಲ್ಲಿಯ ಸಾಮಾನ್ಯ ಬೆಳೆಯಾಗಿರುವ ಕಾಫಿ, ಕರಿಮೆಣಸು, ಏಲಕ್ಕಿ, ಭತ್ತ ಜತೆಗೆ ಅತ್ಯಾಧುನಿಕ ಪದ್ಧತಿಯ ಕೃಷಿಗೂ ಅವಕಾಶ ಆಗಬಹುದು. ಕೊಡಗಿನ ಜತೆ ವಿಶೇಷ ನಂಟು ಹೊಂದಿರುವ ಇಲ್ಲಿಯ ಜೇನು, ಕಿತ್ತಳೆ, ಕಾಚಂಪುಳಿ ಹಾಗೂ ವೈಶಿಷ್ಟ್ಯಪೂರ್ಣ ಆಹಾರ ಪದ್ಧತಿಗಳಿಗೂ ಜಾಗತಿಕ ಮನ್ನಣೆ, ಮಾರುಕಟ್ಟೆ ವಿಸ್ತರಿಸಬಹುದು ಎನ್ನುವು ಮಾತುಗಳೂ ಕೇಳಿಬರುತ್ತಿದೆ.

ಅಟಲ್ ಕಮ್ಯುನಿಟಿ ಇನೋವೇಷನ್ ಸೆಂಟರ್ (ಎಸಿಐಸಿ) ಆರಂಭಕ್ಕೆ ಕೊಡಗು ವಿಶ್ವವಿದ್ಯಾಲಯ ಕ್ಯಾಂಪಸ್ ಉತ್ತಮ ಜಾಗ ಎನ್ನುವ ಅಭಿಪ್ರಾಯವೂ ಇದೆ. ಇದಕ್ಕೆ ಪೂರಕವಾಗಿ ಕೊಡಗು ವಿವಿಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಕೂಡ ಈ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೊಡಗು ವಿವಿಯಲ್ಲಿ ಎಸಿಐಸಿ ಆರಂಭಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲೂ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಕೊಡಗಿನಂತ ಪ್ರದೇಶಕ್ಕೆ ಈ ರೀತಿಯ ಸಂಸ್ಥೆ ಹೇಗೆ ಅನುಕೂಲ ಆಗಬಲ್ಲದು ಎಂದು ಕೂಡ ಇದೇ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದ್ದರು. ಭೌಗೋಳಿಕವಾಗಿ ಕೊಡಗಿನಲ್ಲಿದ್ದರೂ ಪಕ್ಕದ ಮೈಸೂರು ಮತ್ತು ಹಾಸನ ಜಿಲ್ಲೆಯ ವಾತಾವರಣ ಲಕ್ಷಣಗಳೊಂದಿಗೆ ಪ್ರಾಕೃತಿಕ ಹವಾನಿಯಂತ್ರಿಕ ವ್ಯವಸ್ಥೆ ಹೊಂದಿರುವ ಚಿಕ್ಕ ಅಳುವಾರದ ಕೊಡಗು ವಿವಿ ಕ್ಯಾಂಪಸ್ ಎಲ್ಲಾ ರಿತಿಯಿಂದಲೂ ಎಸಿಐಸಿ ಆರಂಭಕ್ಕೆ ಸೂಕ್ತ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ.

ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಅಟಲ್ ಕಮ್ಯುನಿಟಿ ಇನೋವೇಷನ್ ಸೆಂಟರ್ ಆರಂಭಿಸುವ ಚಿಂತನೆ ಇದೆ. ಇದರಿಂದ ನವೋದ್ಯಮಿಗಳಿಗೆ ಸಾಕಷ್ಟು ಅನುಕೂಲ ಆಗುತ್ತದೆ. ಕೊಡಗಿನಂತಹ ಕೃಷಿ ಪ್ರಧಾನ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಆಧಾರಿತ ಉದ್ಯಮಗಳ ಹೊಸ ಸಾಧ್ಯತೆ ಬಗ್ಗೆ ಗಮನ ಹರಿಸಬಹುದು. ಇಲ್ಲಿಯ ಪ್ರಾಕೃತಿಕ ಸಂಪತ್ತನ್ನು ಕಾಪಾಡಿಕೊಂಡು ಉದ್ಯೋಗ ಸೃಷ್ಟಿಗೂ ಅವಕಾಶ ಸಿಗಲಿದೆ. ಈ ಬಗ್ಗೆ ಸಂಬಂಧಿಸಿದ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುವುದು.
ಪ್ರೊ. ಅಶೋಕ ಸಂಗಪ್ಪ ಆಲೂರ, ಕೊಡಗು ವಿವಿ ಕುಲಪತಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net