ಮಂಗಳೂರು ಅಂ.ರಾ. ವಿಮಾನ ನಿಲ್ದಾಣಕ್ಕೆ ಎಸಿಐ ಲೆವೆಲ್-5 ಮಾನ್ಯತೆ

ಮಂಗಳೂರು ಅಂ.ರಾ. ವಿಮಾನ ನಿಲ್ದಾಣಕ್ಕೆ ಲಭಿಸಿದ ಎಸಿಐ ಲೆವೆಲ್-5 ಮಾನ್ಯತೆ ಪ್ರಮಾಣಪತ್ರ.
ಮಂಗಳೂರು ಅಂ.ರಾ. ವಿಮಾನ ನಿಲ್ದಾಣಕ್ಕೆ ಲಭಿಸಿದ ಎಸಿಐ ಲೆವೆಲ್-5 ಮಾನ್ಯತೆ ಪ್ರಮಾಣಪತ್ರ.
Published on
ಮಂಗಳೂರು : ಪ್ರಯಾಣಿಕರ ಅನುಭವ ನಿರ್ವಹಣೆಯಲ್ಲಿ ಜಾಗತಿಕ ಮಟ್ಟದ ಅತ್ಯುನ್ನತ ಗೌರವವೆಂದೇ ಪರಿಗಣಿಸಲ್ಪಡುವ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ಎಸಿಐ) ಏರ್‌ಪೋರ್ಟ್ ಕಸ್ಟಮರ್ ಎಕ್ಸ್‌ಪೀರಿಯನ್ಸ್ ಅಕ್ರಿಡಿಟೇಶನ್ ಕಾರ್ಯಕ್ರಮದ ಲೆವೆಲ್-5 ಮಾನ್ಯತೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಭಿಸಿದೆ.
ಈ ಮೂಲಕ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಜಾಲದಲ್ಲಿ ಮುಂಬೈ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳ ನಂತರ ಈ ಗೌರವ ಪಡೆದ ಮೂರನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಮಂಗಳೂರು ಪಾತ್ರವಾಗಿದೆ. ಕರ್ನಾಟಕದಲ್ಲಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಈ ಮಾನ್ಯತೆ ಪಡೆದ ಎರಡನೇ ವಿಮಾನ ನಿಲ್ದಾಣವೂ ಇದಾಗಿದೆ. ದೇಶದಲ್ಲಿ ಇದುವರೆಗೆ ಕೇವಲ ನಾಲ್ಕು ವಿಮಾನ ನಿಲ್ದಾಣಗಳಿಗೆ ಮಾತ್ರ ಈ ಜಾಗತಿಕ ಮಾನ್ಯತೆ ಲಭಿಸಿದೆ.
ಎಸಿಐ ಕಸ್ಟಮರ್ ಎಕ್ಸ್‌ಪೀರಿಯನ್ಸ್ ಅಕ್ರಿಡಿಟೇಶನ್ ಕಾರ್ಯಕ್ರಮವು ವಿಮಾನ ನಿಲ್ದಾಣಗಳು ಪ್ರಯಾಣಿಕರ ಅನುಭವವನ್ನು ತಮ್ಮ ಕಾರ್ಯತಂತ್ರ, ಆಡಳಿತ, ಸಂಸ್ಥೆಯ ಸಂಸ್ಕೃತಿ, ಕಾರ್ಯಾಚರಣೆ ಹಾಗೂ ಸೇವಾ ವಿತರಣೆಯಲ್ಲಿ ಹೇಗೆ ಅಳವಡಿಸಿಕೊಂಡಿವೆ ಎಂಬುದನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವ ಜಾಗತಿಕ ಮಾನದಂಡವಾಗಿದೆ.
ಮಂಗಳೂರು ವಿಮಾನ ನಿಲ್ದಾಣವು ಫೆಬ್ರವರಿ 2024ರಲ್ಲಿ ಲೆವೆಲ್-3 ಹಾಗೂ ಜುಲೈ 2025ರಲ್ಲಿ ಲೆವೆಲ್-4 ಮಾನ್ಯತೆ ಪಡೆದಿತ್ತು. ಇದೀಗ ಕೇವಲ ಒಂದು ವರ್ಷದೊಳಗೆ ಲೆವೆಲ್-5 ಮಾನ್ಯತೆ ಪಡೆದು, ಸುಮಾರು 30 ತಿಂಗಳ ಅವಧಿಯಲ್ಲಿ ಲೆವೆಲ್-3ರಿಂದ ಲೆವೆಲ್-5ಕ್ಕೆ ಏರಿರುವುದು ಪ್ರಯಾಣಿಕ-ಕೇಂದ್ರಿತ ಸೇವೆಯತ್ತ ಸಂಸ್ಥೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಪ್ರಯಾಣಿಕರ ಅನುಭವವನ್ನು ಸಂಸ್ಥೆಯ ಎಲ್ಲ ಹಂತಗಳಲ್ಲಿ ಅಳವಡಿಸಿಕೊಂಡು, ಸಿಐಎಸ್‌ಎಫ್, ಕಸ್ಟಮ್ಸ್, ವಲಸೆ ಇಲಾಖೆ, ವಿಮಾನಯಾನ ಸಂಸ್ಥೆಗಳು ಸೇರಿದಂತೆ ಎಲ್ಲ ಪಾಲುದಾರರ ಸಹಭಾಗಿತ್ವದ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುತ್ತಿರುವುದನ್ನು ಗುರುತಿಸುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net