

ಗುತ್ತಲ: ಆಧುನಿಕ ಕಾಲದಲ್ಲಿ ಬೇಕಾದಷ್ಟು ಪ್ರಗತಿ ಕಂಡರೂ ಮನಸಿಗೆ ಶಾಂತಿ, ನೆಮ್ಮದಿ ಇಲ್ಲ. ಶಿವಪೂಜೆ, ಶಿವಧ್ಯಾನದಿಂದ ಮಾನಸಿಕ ಶಾಂತಿ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರ ನೂತನ ಶಿಲಾಮಠದ ಉದ್ಘಾಟನೆ ಹಾಗೂ ಕಳಸಾರೋಹಣ ಅಂಗವಾಗಿ ಬುಧವಾರ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಭೌತಿಕವಾಗಿ ಬಹಳಷ್ಟು ಸಂಪತ್ತು ಸಂಪನ್ಮೂಲ ಸಂಪಾದಿಸಿದರೂ, ಇರಬೇಕಾದ ಸಂತೃಪ್ತಿ, ಸಮಾಧಾನ ಇಲ್ಲ. ನಾಗರಿಕತೆಯ ನಾಗಾಲೋಟದಲ್ಲಿ ಮನುಷ್ಯ ಸಿಲುಕಿ ತೊಳಲಾಡುತ್ತಿದ್ದಾನೆ. ಗುರು ಕೊಟ್ಟ ಇಷ್ಟಲಿಂಗ ಪೂಜೆಯಿಂದ ಅನಿಷ್ಟಗಳು ದೂರವಾಗಿ ಇಷ್ಟಾರ್ಥಗಳು ಪ್ರಾಪ್ತವಾಗುತ್ತವೆ ಎಂದು ಜಗದ್ಗುರು ರೇಣುಕಾಚಾರ್ಯರು ಬೋಽಸಿದ್ದಾರೆ. ಶಿವಪೂಜೆಯಿಂದ ಪೂರ್ವಜನ್ಮದ ಕರ್ಮಗಳು ಕೂಡ ನಾಶವಾಗುತ್ತವೆ ಎಂದರು.
ಬ್ರಹ್ಮ, ವಿಷ್ಣು, ಸಕಲ ದೇವಾನುದೇವತೆಗಳು ಶಿವನನ್ನು ಪೂಜಿಸಿ ಸತ್‌ಫಲಗಳನ್ನು ಪಡೆದಿದ್ದಾರೆ. ಜಗತ್ತನ್ನೇ ವ್ಯಾಪಿಸಿರುವ ಭಗವಂತ ವೀರಶೈವರ ಕರದಲ್ಲಿ ಇಷ್ಟಲಿಂಗವಾಗಿ ಪೂಜೆಗೊಳ್ಳುತ್ತಿದ್ದಾನೆ. ದೇಹವೇ ದೇವಾಲಯ ಇಷ್ಟಲಿಂಗವೇ ಆರಾಧ್ಯ ದೈವವೆಂದು ಪೂಜಿಸುವ ಸಮುದಾಯ ಯಾವುದಾದರೂ ಇದ್ದರೆ ಅದು ವೀರಶೈವ ಲಿಂಗಾಯತ ಸಮಾಜ. ಅಂಗದ ಮೇಲೆ ಲಿಂಗ ಇದ್ದವರೆಲ್ಲರೂ ವೀರಶೈವ ಲಿಂಗಾಯತರು. ಹೆಸರಿಗೆ ಲಿಂಗಾಯಿತರಾದರೆ ಸಾಲದು. ಆಚರಣೆಯೊಂದಿಗೆ ವೀರಶೈವ ಲಿಂಗಾಯಿತ ಆಗಬೇಕೆಂಬುದು ಆಚಾರ್ಯರ ಮತ್ತು ಶರಣರ ಸದಾಶಯ ಆಗಿತ್ತು ಎಂದರು.
ನೆಗಳೂರು ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಂಪಸಾಗರ ನವಲೆ ಹಿರೇಮಠದ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅಂಗೂರ ಹಿರೇಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ಗುತ್ತಲ- ಅಗಡಿಯ ಶ್ರೀ ಗುರುಸಿದ್ಧ ಸ್ವಾಮೀಜಿ, ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಸಿ.ಬಿ. ಕುರವತ್ತಿಗೌಡರ, ರುದ್ರಪ್ಪ ಹಾದಿಮನಿ, ಕೊಟ್ರೇಶಪ್ಪ ಅಂಗಡಿ, ಚನ್ನಪ್ಪ ಕಲಾಲ, ಅಜ್ಜಪ್ಪ ತರ್ಲಿ, ಸಂಗಯ್ಯಸ್ವಾಮಿ ಭೂಸನೂರಮಠ, ಶಂಕ್ರಪ್ಪ ಚಂದಾಪುರ, ಪಿ. ಕುಮಾರ, ನಾಗಯ್ಯ ಹೇಮಗಿರಿಮಠ, ಶೇಖರಯ್ಯ ಹೇಮಗಿರಿಮಠ, ಶಂಭುಲಿAಗಯ್ಯ ಹೇಮಗಿರಿಮಠ, ಭಕ್ತರು ಉಪಸ್ಥಿತರಿದ್ದರು.
ಶ್ರೀಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರ ನೂತನ ಶಿಲಾ ಮಠದ ಗೋಪುರಗಳ ಕಳಸಾರೋಹಣ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಅಮೃತ ಹಸ್ತದಿಂದ ನೆರವೇರಿತು. ಭಕ್ತರಿಂದ ಜಯಘೋಷಗಳು ಮುಗಿಲುಮುಟ್ಟಿದವು. ನಂತರ ಅನ್ನದಾಸೋಹ ಜರುಗಿತು.