

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸರ್ಕಾರಿ ನಿವೃತ್ತ ನೌಕರರು, ಹಿರಿಯ ನಾಗರಿಕರ ಸೇವಾ ಸಂಸ್ಥೆ ಆಶ್ರಯದಲ್ಲಿ ಪ್ರೊ.ಗಣಪತಿ ಕುಳಮರ್ವ, ಬೆಳಾಲು ಎಸ್ಡಿಎಂ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ ಭಟ್, ಚೊಕ್ಕಾಡಿ ಮತ್ತು ದಾಸಪ್ಪ ಗೌಡ ಕೊಲ್ಲಿ ಇವರ ಸೇವೆ-ಸಾಧನೆ ಮನ್ನಿಸಿ ಸಂಘದ ಮಾಸಿಕ ಸಭೆಯಲ್ಲಿ ಗೌರವಿಸಲಾಯಿತು.
ಪತ್ರಕರ್ತ ಆರ್.ಎನ್.ಪೂವಣಿ ಹಿರಿಯರನ್ನು ಗೌರವಿಸಿ ಮಾತನಾಡಿ, ಮೂವರು ಹಿರಿಯ ಸಾಧಕರ ಸೇವೆ, ಸಾಧನೆ ಕಿರಿಯರಿಗೆ ಪ್ರೇರಕ ಶಕ್ತಿಯಾಗಿ ಸ್ಫೂರ್ತಿಯಾಗಿದೆ. ಸಂಘದ ಅಧ್ಯಕ್ಷ ಬಿ.ವಿಠಲ ಶೆಟ್ಟಿ ಅವರ ದಕ್ಷ ನೇತೃತ್ವದಲ್ಲಿ ಸರ್ವ ಸದಸ್ಯರ ಸಕ್ರಿಯ ಸಹಕಾರದೊಂದಿಗೆ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ ಎಂದರು.
ಸಂಘದ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರೂ.ಗೂ ಅಧಿಕ ದೇಣಿಗೆ ನೀಡಿದ ನಿವೃತ್ತ ಮುಖ್ಯಶಿಕ್ಷಕ ಬಿ.ಸೋಮಶೇಖರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಬಿ.ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚೆಗೆ ನಿಧನರಾದ ನಿವೃತ್ತ ಮುಖ್ಯಶಿಕ್ಷಕ ಕಾಶ್ಮೀರ್ ಮಿನೇಜಸ್ ಅವರಿಗೆ ತೆರೆಸಾ ಲೋಬೊ ನುಡಿನಮನ ಸಲ್ಲಿಸಿ, ಬಳಿಕ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯದರ್ಶಿ ವಿಶ್ವಾಸ ರಾವ್ ವರದಿ ಮಂಡಿಸಿದರು. ವಸಂತ ಸುವರ್ಣ ವಂದಿಸಿದರು.