ಯಶಸ್ಸಿನ ಸ್ವಯಂವ್ಯಾಖ್ಯಾನ ಸಾಧನೆಗೆ ಪೂರಕ : ಮೇಘವಿ ಮಂಜುನಾಥ್ ಚಿಂತನೆ

New Project (3)
Published on

ಬೆಳ್ತಂಗಡಿ: ಯಶಸ್ಸಿನ ಸೂತ್ರಗಳು ಭಿನ್ನವಾಗಿರುತ್ತವೆ. ಸಾಧಿಸುವವರು ಅವರದ್ದೇ ಆದ ಯಶಸ್ಸಿನ ವ್ಯಾಖ್ಯಾನ ಕಂಡುಕೊಳ್ಳಬೇಕು. ಹಾಗಾದಾಗ ಮಾತ್ರ ಉಳಿದವರಿಗಿಂತ ಭಿನ್ನ ಸಾಧನೆ ಸಾಧ್ಯವಾಗುತ್ತದೆ ಎಂದು ಕ್ವಿಜ್ ಮಾಸ್ಟರ್, ಬೆಂಗಳೂರಿನ ಕ್ಯೂರಿಯಾಸಿಟಿ ನಾಲೆಡ್ಜ್ ಸೊಲ್ಯೂಷನ್ಸ್ ಸಂಸ್ಥಾಪಕಿ ಮೇಘವಿ ಮಂಜುನಾಥ್ ಹೇಳಿದರು.

ಗುರುವಾರ ಉಜಿರೆಯ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸಾಧಕರ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರಿನ ಕ್ಷೇಮವನದ ನಿರ್ದೇಶಕಿ ಶ್ರದ್ಧಾ ಅಮಿತ್ ಮಾತನಾಡಿ, ಸೃಜನಶೀಲತೆ ಜೀವಂತವಾಗಿರಿಸಿಕೊಳ್ಳುವ, ಆರೋಗ್ಯಕ್ಕೆ ಪೂರಕವಾಗುವ ಮತ್ತು ಜೀವನೋಪಾಯ ಕಂಡುಕೊಳ್ಳುವ ಹವ್ಯಾಸಗಳನ್ನಿರಿಸಿಕೊಳ್ಳಬೇಕು. ವಿದ್ಯಾರ್ಥಿ ಬದುಕನ್ನು ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಪೂರಕವಾಗಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಮಟ್ಟದಲ್ಲಿ ಸ್ಪರ್ಧೆಯೊಡ್ಡುವುದಕ್ಕೆ ಬೇಕಾದ ಶೈಕ್ಷಣಿಕ ಸಾಮರ್ಥ್ಯ ಮತ್ತು ಪ್ರತಿಭಾನ್ವಿತ ಕೌಶಲ ಒದಗಿಸಿಕೊಡುವುದಕ್ಕೆ ಎಸ್‌ಡಿಎಂ ಕಾಲೇಜು ಪ್ರಾಶಸ್ತ್ಯ ನೀಡುತ್ತಿದೆ ಎಂದರು.

ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿಭಾಗಗಳ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪದವಿ ಹಾಗೂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಕೃತಿ, ಮೇಘಾ, ಮಾರುತಿ ಭಗವಾನ್, ಅಮೀರ್ ಉಪಸ್ಥಿತರಿದ್ದರು.

ತೃತೀಯ ಬಿಸಿಎ ವಿದ್ಯಾರ್ಥಿ ಪ್ರತಿನಿಧಿ ಸುದೇಶ್ ಗೌಡ ಸ್ವಾಗತಿಸಿದರು. ದ್ವಿತೀಯ ಎಂಸಿಜೆ ವಿದ್ಯಾರ್ಥಿ ಪ್ರತಿನಿಧಿ ಶ್ರವಣ್ ಕುಮಾರ್ ವಂದಿಸಿದರು. ಸಿಂಚನ ಕಲ್ಲೂರಾಯ ಹಾಗೂ ಧರಿತ್ರಿ ಭಿಡೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net