ಗುರುವಿನ ಕೃಪೆ ಇಲ್ಲದ ಸಾಧನೆ ಶೂನ್ಯ

11-byd-1
Published on

ಬ್ಯಾಡಗಿ: ಗುರುವಿನ ಮಾರ್ಗದರ್ಶನ, ಕೃಪೆಯಿರದಿದ್ದಲ್ಲಿ ಜೀವನದಲ್ಲಿ ಏನೇ ಸಾಧನೆ ಮಾಡಿದರೆ ಅದು ಶೂನ್ಯ. ಅಕ್ಷರ ಜ್ಞಾನ, ಧರ್ಮ ಪರಂಪರೆ, ವಿಧಿ-ವಿಧಾನಗಳು, ಮನುಷ್ಯನನ್ನು ಕತ್ತಲಿನಿಂದ ಬೆಳಕಿನೆಡೆಗೆ ತೆರಳಲು ಅಗತ್ಯವಾಗಿವೆ ಎಂದು ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದ 8 ನೇ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದರು.

ಸಾಯಿ ಮಂದಿರ ಹಿರೇಮಠ ಸಂಸ್ಥಾನ ಧರ್ಮಾಧಿಕಾರಿ ಮಂಜಯ್ಯಸ್ವಾಮಿ ಹಿರೇಮಠ ಮಾತನಾಡಿ, ಹುಣ್ಣಿಮೆ ಧಾರ್ಮಿಕವಾಗಿ ಪವಿತ್ರ ಹಾಗೂ ಮಹತ್ವದ ದಿನವಾಗಿದ್ದು, ಶಾಂತಿ, ನೆಮ್ಮದಿ ಹಾಗೂ ಸಮಾಜದ ಅಭ್ಯುದಯಕ್ಕಾಗಿ ಸಾಮೂಹಿಕ ಹೋಮ ನಡೆಸುತ್ತಿದ್ದೇವೆ. ಆಧುನಿಕ ಜೀವನದಲ್ಲಿ ನಾವು ಧಾರ್ಮಿಕ ಆಚರಣೆಗಳಿಂದ ದೂರ ಸರಿಯುತ್ತ ಹಲವು ಮೋಹದಲ್ಲಿ ಸಿಲುಕಿದ್ದೇವೆ. ಜೀವನದಲ್ಲಿ ಎಚ್ಚೆತ್ತುಕೊಳ್ಳಲು ನಾವು ಧರ್ಮದತ್ತ ತೆರಳಬೇಕಿದೆ ಎಂದರು.

ಭಜನೆ ಹಾಗೂ ನಾಮಾವಳಿ: ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 6 ಗಂಟೆಗೆ ಸಾಯಿಬಾಬಾರಿಗೆ ಕಾಕಡಾರತಿ, ಮಹಾರುದ್ರಾಭಿಷೇಕ ಹಾಗೂ ಸಾಯಿಬಾಬಾ ಭಜನೆ, ದತ್ತಾತ್ರೇಯ ಹೋಮ, ಗಣಹೋಮ, ಆಶ್ಲೇಷಾ ಬಲಿಪೂಜೆ, ಸರ್ಪದೋಷ, ಅಕ್ಷರ ಅಭ್ಯಾಸ, ವೀರಭದ್ರೇಶ್ವರ ಗುಗ್ಗಳ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಶ್ರೀ ಸಾಯಿ ಸೇವಾ ಸಮಿತಿ ಸದಸ್ಯರು ತಂಡೋಪತಂಡವಾಗಿ ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರಿಗೂ ಭಜನೆ ನಾಮಾವಳಿ ಸ್ತೋತ್ರ ಪಠಿಸಿದರು.

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಪುರಸಭೆ ಸದಸ್ಯ ವಿನಯ ಹಿರೇಮಠ, ಉದ್ದಿಮೆದಾರ ವೀ.ವಿ. ಹಿರೇಮಠ, ರವೀಂದ್ರ ಹೊನ್ನಾಳಿ, ಗಿರೀಶಸ್ವಾಮಿ ಇಂಡಿಮಠ, ಯು.ಬಿ. ನಂದಿಗೌಡ್ರ, ರಾಜು ಹೊಸಕೇರಿ, ಶಾಂತಯ್ಯಶಾಸ್ತ್ರೀ ಹಿರೇಮಠ, ಬಂಗಾರಯ್ಯ ಕೊಪ್ಪದ, ಶಿವು ಕಲ್ಲಾಪುರ, ದಾಕ್ಷಾಯಿಣಿ ಹರಗಮಟ್ಟಿ, ರಾಜಣ್ಣ ಹೊಸಳ್ಳಿ, ಕರಿಬಸಯ್ಯ ಹಿರೇಮಠ ಇದ್ದರು.

ಫೋಟೋ11ಬಿವೈಡಿ1:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net